Mon. Oct 13th, 2025

Hassan: ಆಕೆಯೇ ನನ್ನ ಬಾಳ ಸಂಗಾತಿಯೆಂದುಕೊಂಡ ಯುವಕ – ಕೊನೆಗೆ ಬೀದೀಲಿ ಹೆಣವಾದ

ಹಾಸನ (ಅ.13): ಲವ್‌ ಬ್ರೇಕಪ್ ಹಿನ್ನೆಲೆ ಪ್ರೇಮಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಹಳ್ಳಿ ಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ನಡೆದಿದೆ. ಜಿಲ್ಲೆಯ ಹೊಳೆನರಸೀಪುರ ನಿವಾಸಿ ಸುದೀಪ್(24) ಕೊಲೆಯಾದ ಯುವಕ. ಲವ್‌ ಬ್ರೇಕಪ್ ಹಿನ್ನೆಲೆ ಹುಡುಗಿ ಕಡೆಯವರು ಕೊಲೆ ಮಾಡಿಸಿರುವುದಾಗಿ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ⭕ಬೆಂಗಳೂರು: ಆಂಟಿ ಹಿಂದೆ ಹೋದ ಯುವಕ ಸುಟ್ಟು ಕರಕಲಾದ

ಮೈಸೂರು ಜಿಲ್ಲೆ ಮೂಲದ ಯುವತಿ ಜೊತೆಗೆ ಐದು ವರ್ಷಗಳಿಂದ ಪ್ರೀತಿ-ಪ್ರೇಮ ಅಂತ ಸುತ್ತಾಡಿಕೊಂಡಿದ್ದ ಸುದೀಪ್, ಕೆಲ ತಿಂಗಳಿಂದ ಡಿಸ್ಟರ್ಬ್ ಆಗಿದ್ದ. ಹುಡುಗಿಗೆ ಬೇರೆ ಮದುವೆ ಫಿಕ್ಸ್ ಆಗಿದೆಯಂತೆ, ನನ್ನನ್ನ ಆಕೆ ಬೇಡ ಎಂದು ರಿಜೆಕ್ಟ್ ಮಾಡಿದ್ದಾಳೆ. ಐದು ವರ್ಷ ಪ್ರೀತಿಸಿ ಈಗ ಹೇಗೆ ಕೈಕೊಡುತ್ತಾಳೆ ಎಂದು ಸಿಟ್ಟಾಗಿದ್ದ ಸುದೀಪ್, ಮನೆಯವರ ಬಳಿ ಮದುವೆಯಾದರೆ ಅವಳನ್ನೇ ಎಂದು ಹೇಳಿಕೊಂಡಿದ್ದನಂತೆ.

ಶನಿವಾರ ರಾತ್ರಿ 9:30ರ ಸುಮಾರಿಗೆ ಒಂದು ಫೋನ್ ಬಂದಿದೆ. ಮನೆಯಿಂದ ಬೈಕ್ ಏರಿ ಹೊರಟಿದ್ದ ಸುದೀಪ್ ಎಷ್ಟು ಹೊತ್ತಾದರೂ ವಾಪಸ್ ಬಂದಿಲ್ಲ. ರಾತ್ರಿ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಫೋನ್ ಮಾಡಿದರೆ, ಫೋನ್ ಕೂಡ ಸಂಪರ್ಕಕ್ಕೆ ಸಿಕ್ಕಿಲ್ಲ. ಬೆಳಗಾಗುವ ವೇಳೆಗೆ ಸುದೀಪ್ ಶವ ರಸ್ತೆಯಲ್ಲಿ ಪತ್ತೆಯಾಗಿದ್ದು, ಹುಡುಗಿ ಕಡೆಯವರೇ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ಸುದೀಪ್ ಪೋಷಕರು ಆರೋಪಿಸಿದ್ದಾರೆ.

ಹೊಳೆನರಸೀಪುರದ ದಾಸಯ್ಯ ಹಾಗೂ ಗೀತಾ ಅವರ ಮಗ ಸುದೀಪ್, ಹಾಸನದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಅನಾರೋಗ್ಯದ ಕಾರಣದಿಂದ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇದ್ದ. ಸುದೀಪ್ ಇಷ್ಟಪಟ್ಟ ಹುಡುಗಿ ಕೈಕೊಟ್ಟಾಗ ವಿಚಲಿತನಾಗಿದ್ದ, ಐದು ವರ್ಷ ನೀನೇ ಪ್ರಪಂಚ ಎನ್ನುತ್ತಿದ್ದವಳು ಈಗ ಮೋಸ ಮಾಡಿದ್ದಾಳೆ ಎಂದು ಕುಗ್ಗಿ ಹೋಗಿದ್ದ. ಇದೇ ವಿಚಾರಕ್ಕೆ ಆಕೆಯನ್ನ ಪ್ರಶ್ನೆ ಮಾಡಿದ್ದ, ಆದರೆ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಆಗಿದ್ದರೂ ವಿಚಾರ ಮುಚ್ಚಿಟ್ಟು ಸುದೀಪ್ ಜೊತೆ ಸಂಪರ್ಕದಲ್ಲಿದ್ದ ಹುಡುಗಿ ವಿಚಾರ ಗೊತ್ತಾದಾಗ ನನ್ನ ಮರೆತುಬಿಡು ಎಂದಿದ್ದಾಳೆ. ಆದರೆ ಆಕೆಯೇ ನನ್ನ ಬಾಳ ಸಂಗಾತಿ ಎಂದು ನಿಶ್ಚಯ ಮಾಡಿಕೊಂಡಿದ್ದ ಸುದೀಪ್, ನಿನ್ನ ಮರೆಯುವುದಕ್ಕಾಗಲ್ಲ ಎಂದು ಹಠ ಹಿಡಿದಿದ್ದ.

ಮನೆಯಿಂದ ಹೋದವನು ಮರಳಿ ಬರಲಿಲ್ಲ
ಅದೇನಾಯ್ತೊ ಏನೋ ನಿನ್ನೆ ರಾತ್ರಿ ಮನೆಯಿಂದ ಹೊರಹೋದ ಸುದೀಪ್ ಮರಳಿ ಬಂದಿಲ್ಲ. ರಾತ್ರೋ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅಪಘಾತವಾಗಿ ಸಾವು ಸಂಭವಿಸಿದರೆ ಸ್ಥಳದಲ್ಲಿ ಕುಡುಗೋಲು ಏಕೆ ಇರುತ್ತಿತ್ತು. ಬೈಕ್​​ಗೆ ಒಂದು ಸಣ್ಣ ಸ್ಕ್ರಾಚ್​​​ ಆಗಿಲ್ಲ. ಬೈಕ್ ಹಾಗೂ ಶವ ಒಂದೇ ಕಡೆ ಬಿದ್ದಿವೆ. ಶವದ ಮೇಲೆ ಸೊಪ್ಪುಗಳನ್ನ ಹಾಕಿ ಮುಚ್ಚಲಾಗಿದೆ. ಇದೆಲ್ಲವನ್ನು ನೋಡಿದರೆ ಪ್ರೀತಿ ವಿಚಾರದಲ್ಲಿ ಸಿಟ್ಟಾಗಿದ್ದ ಸುದೀಪ್ ನನ್ನ ಮಾತನಾಡಲು ಕರೆಸಿ ಹುಡುಗಿ ಕಡೆಯವರೇ ಕೊಲೆ ಮಾಡಿದ್ದಾರೆ ಎನ್ನುವುದು ಸುದೀಪ್ ಕುಟುಂಬಸ್ಥರ ಆರೋಪವಾಗಿದೆ.ಐದು ವರ್ಷದಿಂದ ಹುಡುಗಿಯೊಬ್ಬಳನ್ನ ಪ್ರೀತಿಸುತ್ತಾ ಮನೆ, ಸ್ನೇಹಿತರಿಗೆಲ್ಲಾ ಇವಳೇ ನನ್ನ ಅರ್ಧಾಂಗಿ ಎಂದು ಹೇಳಿಕೊಂಡಿದ್ದ ಹುಡುಗನ ಹಠಾತ್ ಸಾವು ಹಲವು ಅನುಮಾನ ಮೂಡಿಸಿದೆ. ಇಷ್ಟಪಟ್ಟವನನ್ನ ಬಿಟ್ಟು ಬೇರೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ ಕಡೆಯವರಿಂದಲೇ ಹತ್ಯೆ ಆಗಿದೆಯಾ, ಅಥವಾ ಈ ಸಾವಿನ ಹಿಂದೆ ಬೇರೆ ಏನಾದರೂ ಸತ್ಯ ಅಡಗಿದೆಯಾ ಎಲ್ಲವೂ ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು