Wed. Oct 15th, 2025

ಕುಂದಾಪುರ: ಭೀಕರ ರಸ್ತೆ ಅಪಘಾತಕ್ಕೆ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದ್ದು, ಘಟನೆ ಸಂಬಂಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ⭕ಬೆಳ್ತಂಗಡಿ: ಪಿಯುಸಿ ವಿದ್ಯಾರ್ಥಿನಿ ಅನಾರೋಗ್ಯದಿಂದ ನಿಧನ

ಮೃತನನ್ನು ತೆಕ್ಕಟ್ಟೆ ಗ್ರಾಮದ ನಿವಾಸಿ ಅಭಿಷೇಕ್ ಪೂಜಾರಿ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಸಮೀಪ ಯೂಟರ್ನ್ ತೆಗೆದುಕೊಳ್ಳುವ ಜಾಗದಲ್ಲಿ ಖಾಸಗಿ ಬಸ್ಸೊಂದು ಪ್ರಯಾಣಿಕರನ್ನು ಹತ್ತಿಸಿ ಇಳಿಸುವ ಕಾರ್ಯದಲ್ಲಿ ನಿರತವಾಗಿತ್ತು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಅಭಿಷೇಕ್, ಬಸ್‌ನ ಪಕ್ಕದಿಂದಲೇ ತಿರುವು ತೆಗೆದುಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ.

ಆದರೆ, ಪ್ರಯಾಣಿಕರ ಹತ್ತಿಸುವಿಕೆ ಮುಗಿಯುತ್ತಿದ್ದಂತೆ, ಖಾಸಗಿ ಬಸ್ ಚಾಲಕ ಏಕಾಏಕಿ ವಾಹನವನ್ನು ಚಲಾಯಿಸಿದ್ದಾನೆ. ಇದರಿಂದ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ಸವಾರ ಅಭಿಷೇಕ್ ಆಯತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಅವರು ಬೀಳುತ್ತಿದ್ದಂತೆಯೇ ಹಿಂಬದಿಯಿಂದ ಬರುತ್ತಿದ್ದ ಕ್ರೇನ್ ವಾಹನ ಅವರ ಮೇಲೆ ಹರಿದಿದೆ.

ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಅಭಿಷೇಕ್ ಕೊನೆಯುಸಿರೆಳೆದಿದ್ದಾರೆ.

ಕ್ರೇನ್ ಚಾಲಕನಿಗೆ ತಿಳಿಯದೇ ಆದ ದುರಂತ:

ಬಸ್ ಏಕಾಏಕಿ ಚಲಿಸಿದ ಪರಿಣಾಮ ಅಭಿಷೇಕ್ ಬಿದ್ದದ್ದು ಕ್ರೇನ್ ಚಾಲಕನಿಗೆ ಗೋಚರವಾಗಲಿಲ್ಲ ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿ ಕ್ರೇನ್ ಯುವಕನ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ. ಸಂಪೂರ್ಣವಾಗಿ ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯದಿಂದಲೇ ಯುವಕ ಬಲಿಯಾಗಿದ್ದಾನೆ ಎಂದು ಸ್ಥಳೀಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣ ದಾಖಲು, ತನಿಖೆ:

ಈ ಭೀಕರ ಅಪಘಾತದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಖಾಸಗಿ ಬಸ್ ಚಾಲಕರ ಅಜಾಗರೂಕ ಚಾಲನೆ ಬಗ್ಗೆ ಆಕ್ರೋಶ ಹೆಚ್ಚಾಗಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *