ಕುಂದಾಪುರ: ಅಯ್ಯಪ್ಪ ಸ್ವಾಮಿ ಶಿಬಿರದಿಂದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅಯ್ಯಪ್ಪ ವ್ರತಧಾರಿಗಳು ಕಾಲ್ನಡಿಗೆ (ಪಾದಯಾತ್ರೆ)ಯಲ್ಲಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಓರ್ವ ಮಾಲಾಧಾರಿ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು ಇನ್ನೋರ್ವ ಮಾಲಾಧಾರಿಗೆ ಗಾಯಗಳಾದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕಣ್ಣುಕೆರೆ ಎಂಬಲ್ಲಿ ನಡೆದಿದೆ.
ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಮಾಲಾಧಾರಿಯಾಗಿದ್ದ ಸುರೇಂದ್ರ ಮೊಗವೀರ (35) ಮೃತ ದುರ್ದೈವಿ.

ಘಟನೆ ವಿವರ: ನ.2 ರಂದು ಮುಂಜಾನೆ 5.30ರ ಹೊತ್ತಿಗೆ ಸುಮಾರು 15 ಜನ ಅಯ್ಯಪ್ಪ ಮಾಲಾಧಾರಿಗಳು ಕೋಟೇಶ್ವರ ಮಾರ್ಗವಾಗಿ ಮಂದಾರ್ತಿ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಕಣ್ಣುಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನವು ಸುರೇಂದ್ರ ಅವರಿಗೆ ಹಾಗೂ ಇನ್ನೋರ್ವ ವ್ರತಧಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಟಿವಿಎಸ್ ಸವಾರ ಸಹಿತ ಸುರೇಂದ್ರ ಹಾಗೂ ಇನ್ನೊಬ್ಬರು ರಸ್ತೆಗೆ ಬಿದ್ದಿದ್ದು ಗಾಯಗಳಾಗಿದೆ. ಸುರೇಂದ್ರ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




