ಉಜಿರೆ: ಒಂದು ಕಾಲಕ್ಕೆ ಸಂಸ್ಕೃತ ಭಾಷೆಯು ಜನ ಸಾಮಾನ್ಯರ ಆಡುಭಾಷೆ ಆಗಿತ್ತು. ಈ ಕಾರಣಕ್ಕಾಗಿಯೇ ರಾಮಾಯಣ , ಮಹಾಭಾರತ ಇತ್ಯಾದಿ ಕಾವ್ಯಾದಿಗಳು ರಚನೆಯಾಗಿದ್ದವು. ಇಂತಹ ಕಾವ್ಯಗಳನ್ನು ಪ್ರೀತಿ ಇಟ್ಟು ಓದಿದರೆ ಹಾಗೂ ಆಸಕ್ತಿ ಹುಟ್ಟಿಸಿಕೊಂಡರೆ ಕಾವ್ಯಗಳನ್ನು ಹೆಚ್ಚು ಅರ್ಥೈಸಲು ಸಾಧ್ಯ.

ರಾಮನ ಕಥೆಯನ್ನು ವಾಲ್ಮೀಕಿ ಕವಿಗಳು ರಾಮಾಯಣದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ರಾಮನ ಹಾಗೂ ರಾಮಾಯಣದ ಧನಾತ್ಮಕ ಅಂಶಗಳನ್ನು ಹೆಚ್ಚಾಗಿ ಸಮಾಜಕ್ಕೆ ತಲುಪಿಸಬೇಕು. ರಾಮನ ಆದರ್ಶ ಜೀವನ ಎಲ್ಲರಿಗೂ ಸ್ಫೂರ್ತಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಭಾಷಾ ಉಪನ್ಯಾಸಕ ಶ್ರೇಯಸ್ ಪಾಳಂದೆ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ವತಿಯಿಂದ ನಡೆದ ವಂದೇ ವಾಲ್ಮೀಕಿ ಕೋಕಿಲಮ್ ಎನ್ನುವ ವಾಲ್ಮೀಕಿ ಸ್ಮರಣಾ ಎನ್ನುವ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. ಸಮೃದ್ಧಿ ಸ್ವಾಗತಿಸಿ , ತನ್ಮಯಿ ವಂದಿಸಿದರು .
ಶಾಂಭವಿ ನಿರೂಪಿಸಿದರು.




