ಬೆಂಗಳೂರು :(ನ.26) ಸಂಬಂಧಿಕರ ಮನೆಗೆ ಆಗಮಿಸಿದ್ದ ಮಹಿಳೆಯೊಬ್ಬರು ಸ್ನಾನಕ್ಕೆ ಹೋಗಿದ್ದಾಗ ಬಾತ್‌ರೂಮ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಡೇಪೇಟೆಯಲ್ಲಿ ನಡೆದಿದೆ. ಮಹಿಳೆಯ ಮುಖದಲ್ಲಿ ಪರಚಿದ ಗಾಯಗಳಾಗಿದ್ದು, ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: 🔴ಬೆಳ್ತಂಗಡಿ: ವಕೀಲರ ಭವನದಲ್ಲಿ ಸಂವಿಧಾನ ದಿನಾಚರಣೆಯ ಪ್ರಯುಕ್ತ ರಸಪ್ರಶ್ನೆ ಕಾರ್ಯಕ್ರಮ
ಮೃತ ಮಹಿಳೆಯನ್ನು ಲಕ್ಷ್ಮಿ (25) ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆ ತನ್ನ ಪತಿಯೊಂದಿಗೆ ಮಲ್ಲೇಶ್ವರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಬಳಿಕ ಅಡೇಪೇಟೆಯಲ್ಲಿರುವ ಸಂಬಂಧಿ ಸುಹಾಸಿನಿ ಎಂಬುವವರ ಮನೆಗೆ ತೆರಳಿದ್ದರು.
ಸಂಬಂಧಿಕರ ಮನೆಯಲ್ಲಿ ಸ್ನಾನಕ್ಕೆಂದು ಹೋಗಿದ್ದ ಲಕ್ಷ್ಮಿ ಬಾತ್‌ರೂಮ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಲಕ್ಷ್ಮಿ ಸ್ನಾನಕ್ಕೆ ಹೋಗಿದ್ದ ಸಂದರ್ಭ ಮನೆಯಲ್ಲಿ ಎಲ್ಲರೂ ಇದ್ದರು.
ಅವರು ಸ್ನಾನಕ್ಕೆ ಹೋಗುವ ಮುನ್ನ ಮುಖದಲ್ಲೂ ಯಾವುದೇ ಗಾಯಗಳಾಗಿರಲಿಲ್ಲ. ಆದರೆ ಸ್ನಾನಕ್ಕೆ ಹೋಗಿದ್ದ ಲಕ್ಷ್ಮಿ ತುಂಬಾ ಹೊತ್ತಾದರೂ ಹೊರಗೆ ಬರದ ಕಾರಣ ಸಂಬಂಧಿಕರು ಪರಿಶೀಲಿಸಲು ಹೋದಾಗ ಆಕೆ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಇದಕ್ಕೂ ಮುನ್ನ ಮನೆಗೆ ಯಾರೂ ಬಂದಿರಲಿಲ್ಲ, ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್ ಸಹ ಆನ್ ಆಗಿರಲಿಲ್ಲ. ಬಕೆಟ್‌ನಲ್ಲಿ ನೀರು ಕೂಡಾ ತುಂಬಿಸಿರಲಿಲ್ಲ. ಆದರೆ ಆಕೆ ಬಾತ್‌ರೂಮ್ ನಲ್ಲಿ ನಗ್ನ ಹಾಗೂ ಮುಖದಲ್ಲಿ ಪರಚಿದ ಗಾಯಗಳಾಗಿರುವ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ಈ ಸಾವು ನೆಲಮಂಗಲ ಟೌನ್ ಪೊಲೀಸರಿಗೆ ತಲೆನೋವಾಗಿದೆ. ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಪ್ರಾಥಮಿಕ ತನಿಖೆಯಲ್ಲಿ ಸಾವಿಗೆ ಕಾರಣ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ನಿಜಾಂಶ ಬೆಳಕಿಗೆ ಬರಲಿದೆ.