ಬೆಳ್ತಂಗಡಿ :(ಡಿ.18) ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿ 2010ರ ಜುಲೈ 30ರಂದು ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡು 14 ವರ್ಷ ಜೀವನ್ಮರಣ ಹೋರಾಟ ನಡೆಸಿದ ಕಳಿಯ ಗ್ರಾಮದ ಕು.ಭಾರತಿ ಅವರು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ : ಅಯ್ಯಪ್ಪ ಸ್ವಾಮಿಗಳನ್ನು ಅಶುದ್ಧ ಮಾಡಲು ದನದ ಮಾಂಸ ಎಸೆಯಲಾಗಿದೆ : ನವೀನ್ ನೆರಿಯ
ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಇವರು ಅಪಘಾತದ ಬಳಿಕ ಸೊಂಟದ ಸ್ವಾಧೀನ ಕಳೆದುಕೊಂಡು ಮಲಗಿದ್ದಲ್ಲೇ 14 ವರ್ಷ ನರಕಯಾತನೆ ಅನುಭವಿಸಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿವರ:
2010ರ ಜುಲೈ 30ರಂದು ಭಾರೀ ಮಳೆ ಸುರಿಯುತ್ತಿದ್ದ ವೇಳೆ ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿಯರಾದ ಶಿಕ್ಷಕಿ ಕು.ಭಾರತಿ ಹಾಗೂ ಕು.ಜಯಮಾಲಾ ಕಾಲೇಜು ಬಿಟ್ಟು ಆಟೋದಲ್ಲಿ ಬರುತ್ತಿದ್ದ ಸಂದರ್ಭ ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಪಿಕಪ್ ಸಂತೆಕಟ್ಟೆ ಅಯ್ಯಪ್ಪ ಮಂದಿರದ ಬಳಿ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿತ್ತು.
ಈ ವೇಳೆ ಶಿಕ್ಷಕಿ ಕು.ಜಯಮಾಲಾ ಸ್ಥಳದಲ್ಲೇ ಮೃತಪಟ್ಟಿದ್ದು, ಕು.ಭಾರತಿ ಗಂಭೀರವಾಗಿ ಗಾಯಗೊಂಡಿದ್ದರು. ಕು.ಜಯಮಾಲಾ ಅವರು ಕೆ.ಎ.ಎಸ್. ಪರೀಕ್ಷೆ ಬರೆದಿದ್ದು ಮರಣೋತ್ತರವಾಗಿ ಬಂದ ಫಲಿತಾಂಶದಲ್ಲಿ ಜಯಮಾಲಾ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೆಲ ಸಮಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಗೆ ಬಂದಿದ್ದ ಶಿಕ್ಷಕಿ ಭಾರತಿ ಅವರು ಸೊಂಟದ ಸ್ವಾಧೀನ ಕಳೆದುಕೊಂಡ ಪರಿಣಾಮ ಮಲಗಿದ್ದಲ್ಲೇ ಇದ್ದರು. 14 ವರ್ಷ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಂದ ಎಲ್ಲಾ ನೋವು, ಸವಾಲುಗಳನ್ನು ಎದುರಿಸಿದ್ದರು.
ಕಾಲೇಜು ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿದ್ದು ಅವರಿಗೆ ಅಕೌಂಟೆನ್ಸಿ, ಬ್ಯುಸಿನೆಸ್ ಸ್ಟಡೀ ಹೀಗೇ ಏನೇ ವಿಷಯಗಳಿದ್ದರು ಮೊಬೈಲ್ ಮೂಲಕವೇ ಪಾಠ ಹೇಳಿಕೊಡುತ್ತಿದ್ದರು. ಎಂತಹದ್ದೇ ಪರಿಸ್ಥಿಯಲ್ಲಿದ್ದರೂ ತಾನು ಶಿಕ್ಷಕಿ ಅನ್ನೋದನ್ನು ಮರೆತವರಲ್ಲ. ಅವರ ಪಾಠ ಕೇಳುತ್ತಿದ್ದ ಮಕ್ಕಳಿಗೂ ಭಾರತಿ ಟೀಚರ್ ತುಂಬಾ ಇಷ್ಟ. ಆದರೆ ಇತ್ತೀಚೆಗೆ ಆರೋಗ್ಯದಲ್ಲಾದ ಏರುಪೇರಿನಿಂದ ಇಂದು ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ ಹಾಗೂ ಇಬ್ಬರು ಸಹೋದರ, ನಾಲ್ವರು ಸಹೋದರಿಯರನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.