Thu. Jan 23rd, 2025

Chikkamagaluru: ಅತ್ತ ಮಗಳ ದಿಬ್ಬಣ , ಇತ್ತ ತಂದೆಯ ಮರಣ – ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟು ಮಗಳ ಮದ್ವೆ

ಚಿಕ್ಕಮಗಳೂರು, (ಜ.21): ಆಸ್ಪತ್ರೆಯ ಚಿತಾಗಾರದಲ್ಲಿ ಅಪ್ಪನ ಶವ. ಮದುವೆ ಮಂಟಪದಲ್ಲಿ ಮಗಳ ವಿವಾಹೋತ್ಸವ ನಡೆದಿದೆ. ಮದುವೆ ನಿಲ್ಲಬಾರದು ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸಾವಿನ ಸುದ್ದಿ ಮುಚ್ಚಿಟ್ಟಿದ್ದು, ಅತ್ತ ಅಪ್ಪ ಸಾವನ್ನಪ್ಪಿದ ವಿಷಯ ತಿಳಿಯದೆ ಈ ಮಗಳು ಖುಷಿ ಖಷಿಯಿಂದಲೇ ಸಪ್ತಪದಿ ತುಳಿದಿದ್ದಾಳೆ.

ಈ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದ್ದು, ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದಿದೆ. ಚಂದ್ರು ಎನ್ನುವವರು ಮಗಳ ಮದುವೆಯನ್ನು ಕಣ್ತುಂಬಿಕೊಳ್ಳದೇ ರಸ್ತೆ ಅಪಘಾತದಲ್ಲಿ ಕಣ್ಮುಚ್ಚಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ಜನವರಿ 20 ರಂದು ಚಂದ್ರು ಮಗಳು ದೀಕ್ಷಿತಾಳ ಮದುವೆ ನಿಶ್ಚಯವಾಗಿತ್ತು. ಚಂದ್ರು ತನ್ನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡೋ ತಯಾರಿಯಲ್ಲಿದ್ದರು. ಆದ್ರೆ,ಜನವರಿ 19 ರಂದು ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು ವಾಪಸ್ ಬರುವಾಗ ಬೈಕ್​ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಇತ್ತ ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಹೇಳಿದ ಸಂಬಂಧಿಕರು ಆರತಕ್ಷತೆ-ಮದುವೆ ಕಾರ್ಯವನ್ನು ಮುಗಿಸಿದ್ದಾರೆ. ಆದರೆ ಚಂದ್ರು ಸಾವನ್ನಪ್ಪಿದ್ದ ವಿಷಯ ಪತ್ನಿಗೂ ತಿಳಿದಿರಲಿಲ್ಲ. ಮಗಳಿಗೂ ಗೊತ್ತಿರಲಿಲ್ಲ.

ಮದುವೆ ಕಾರ್ಯಕ್ಕೆ ಓಡಾಡಿ ಸುಸ್ತಾಗಿ ಆಸ್ಪತ್ರೆ ಸೇರಿದ್ದಾರೆ ಎಂದು ಚಂದ್ರು ಪತ್ನಿ-ಮಗಳನ್ನು ನಂಬಿಸಿದ್ದಾರೆ. ಎಲ್ಲಾ ಮದುವೆ ಶಾಸ್ತ್ರ ಮುಗಿಯುವ ತನಕ ಆಸ್ಪತ್ರೆಯಲ್ಲೇ ಇಡಲಾಗಿದ್ದ ಚಂದ್ರು ಮೃತದೇಹವನ್ನು ಮನೆಗೆ ರವಾನಿಸಿ ಬಳಿಕ ಸಾವಿನ ಸುದ್ದಿಯನ್ನು ತಿಳಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆಯೇ ನವ ಜೋಡಿ ಹಾಗೂ ಸಂಬಂಧಿಕರು ಮದುವೆ ಮಂಟಪದಿಂದ ಮನೆಗೆ ಓಡೋಡಿ ಹೋಗಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪತ್ನಿ-ಮಗಳ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *