ಉಜಿರೆ:(ಫೆ.26) ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಿ ಆರಂಭಿಕ ಹಂತದಲ್ಲಿ ಅವುಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡುವುದು ನಮ್ಮ ಆರೋಗ್ಯ ತಪಾಸಣಾ ಶಿಬಿರಗಳ ಆಶಯ ಹಾಗೂ ನಮ್ಮ ಸಾಮಾಜಿಕ ಬದ್ಧತೆಯಾಗಿದೆ.

ಇದನ್ನೂ ಓದಿ: ಉಜಿರೆ: ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಗೆ ಡಾ.ಪದ್ಮನಾಭ ಕಾಮತ್ ಭೇಟಿ
ಈ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಮುದಾಯ ಮಟ್ಟದಲ್ಲಿ ಯೋಗಕ್ಷೇಮ ಸಂಸ್ಕೃತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ತಿಳಿಸಿದರು.

ಡಾ.ಗೋಪಾಲಕೃಷ್ಣ ಅವರು ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮದ ಅಂಗವಾಗಿ ಉಜಿರೆಯ ಬೆನಕ ಆಸ್ಪತ್ರೆ ಮತ್ತು ಬೆನಕ ಚಾರಿಟೇಬಲ್ ಟ್ರಸ್ಟ್ ನ ಪ್ರಾಯೋಜಕತ್ವದಲ್ಲಿ ಶತಮಾನೋತ್ಸವದ ಸಂಭ್ರಮದಲ್ಲಿರುವ ಕಲ್ಮಂಜದ ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬೆನಕ ಆಸ್ಪತ್ರೆಯ ಸಿಬ್ಬಂದಿ ಜನರ ಬಳಿಗೆ ಬಂದು ಉಚಿತ ಆರೋಗ್ಯ ತಪಾಸಣೆ ಮಾಡುವ ಮೂಲಕ ಸಮುದಾಯ ಮಟ್ಟದಲ್ಲಿ ರೋಗದ ಬಗ್ಗೆ ಇರುವ ಭಯವನ್ನು ಹೋಗಲಾಡಿಸಿ ಜಾಗೃತಿಯನ್ನು ಮೂಡಿಸುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ಡಾ.ಅಂಕಿತಾ ಜಿ,ಭಟ್ ಅವರು ಮಾತನಾಡುತ್ತಾ ಮಹಿಳೆಯರು ಅನೇಕ ಬಾರಿ ಗಾಯ,ನೋವು ಅಥವಾ ಚೇತರಿಕೆಗೆ ಬೇಕಾಗುವ ದೀರ್ಘ ಸಮಯದ ಕುರಿತಾದ ಭಯದಿಂದಾಗಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಲು ಹಿಂದೇಟು ಹಾಕುತ್ತಾರೆ. ಲ್ಯಾಪ್ರೋಸ್ಕೋಪಿಯು ಈ ಎಲ್ಲಾ ಅಂಜಿಕೆಗಳಿಗೆ ಉತ್ತರವಾಗಿದ್ದು ವೈದ್ಯಕೀಯ ಆರೈಕೆ ಪಡೆಯಲು ಉತ್ತೇಜಕವಾಗಿದೆ ಎಂದು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲ್ಮಂಜ ಶಾಲೆಯ ಶತಮಾನೋತ್ಸವ ಸಮಿತಿಯ ಗೌರವ ಸಲಹೆಗಾರ ಶ್ರೀ ಶುಭಚಂದ್ರರಾಜ ಜೈನ್, ವೇಣೂರು ಆರಕ್ಷಕ ಠಾಣೆಯ ಸಹಾಯಕ ಪೋಲೀಸ್ ಉಪನಿರೀಕ್ಷಕ ಶ್ರೀ ರಾಮಯ್ಯ ಹೆಗ್ಡೆ, ಶಾಲಾ ಮೇಲುಸ್ತುವಾರಿ ಸಮಿತಿಯ ಮಾಜಿ ಅಧ್ಯಕ್ಷ ಶ್ರೀ ಮೋನಪ್ಪ.ಟಿ, ಉಜಿರೆಯ ಎಸ್.ಎ.ಮೆಡಿಕಲ್ಸ್ ನ ಶ್ರೀ ಪ್ರಕಾಶ್ ಫೆರ್ನಾಂಡಿಸ್, ಶಾಲೆಯ ಹಿರಿಯ ವಿದ್ಯಾರ್ಥಿ ಕುಕ್ಕೆಮಜಲು ಕೊರಗಪ್ಪ ಗೌಡ, ಪ್ರವೀಣ್ ಫೆರ್ನಾಂಡೀಸ್ ಹಾಗೂ ಅಬ್ದುಲ್ ಅಜೀಜ್ ನಿಡ್ಗಲ್ ಮೊದಲಾದವರು ಉಪಸ್ಥಿತರಿದ್ದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞರಾದ ಡಾ. ಆದಿತ್ಯ ರಾವ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆಯಾಗಿರುವ ಡಾ.ಅಂಕಿತಾ ಜಿ,ಭಟ್, ಎಲುಬು ಮತ್ತು ಕೀಲು ತಜ್ಞರಾಗಿರುವ ಡಾ.ರೋಹಿತ್.ಜಿ.ಭಟ್, ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ವಿಜೇತ್ ರೈ ಹಾಗೂ ಮಕ್ಕಳ ತಜ್ಞರಾದ ಡಾ. ಶಂತನು ಪ್ರಭು ಅವರು ಉಚಿತ ತಪಾಸಣೆ ಮಾಡಲು ಸಹಕರಿಸಿದರು.
ವಿಶೇಷವಾಗಿ ಈ ಶಿಬಿರದಲ್ಲಿ ಉಚಿತ ಇ.ಸಿ.ಜಿ, ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ಅಗತ್ಯ ಔಷಧ ವಿತರಣೆ ಮಾಡಲಾಯಿತು.
