Tue. Mar 18th, 2025

Bantwal: ವಕೀಲರ ಸಂಘ ಬಂಟ್ವಾಳ (ರಿ.) ಇವರ ವತಿಯಿಂದ ಬೈಕ್ ಅಪಘಾತದಲ್ಲಿ ಮೃತರಾದ ಯುವ ನ್ಯಾಯವಾದಿ ಪ್ರಥಮ್ ಬಂಗೇರ ಅವರಿಗೆ ನುಡಿ ನಮನ

ಬಂಟ್ವಾಳ:(ಮಾ.18) ಬೈಕ್ ಅಪಘಾತದಲ್ಲಿ ಮೃತರಾದ ಯುವ ನ್ಯಾಯವಾದಿ ಪ್ರಥಮ್ ಬಂಗೇರ ಅವರಿಗೆ ವಕೀಲರ ಸಂಘ ಬಂಟ್ವಾಳ (ರಿ.) ಇವರ ವತಿಯಿಂದ ಬಿಸಿರೋಡಿನ ನ್ಯಾಯಾಲಯದಲ್ಲಿರುವ ಬಾರ್ ಅಸೋಸಿಯೇಶನ್ ನಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: 🔴ಬಂಟ್ವಾಳ : ಹಿಂದೂ ರಾಷ್ಟ್ರದ ಸಂಕಲ್ಪ ಮಾಡಿದ 800 ಕ್ಕೂ ಅಧಿಕ ಹಿಂದುತ್ವನಿಷ್ಟರು!


ನುಡಿ ನಮನ ಸಲ್ಲಿಸಿದ ಹಿರಿಯ ಸಿವಿಲ್ ನ್ಯಾಯಧೀಶೆ,ಜೆ.ಎಮ್.ಎಫ್.ಸಿ.ಬಂಟ್ವಾಳ, ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇದರ ಅಧ್ಯಕ್ಷೆ ಭಾಗ್ಯಮ್ಮ ಅವರು, ಮಾತನಾಡಿ ವಾಹನಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಮೀರಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ,ಸಾವು ನೋವುಗಳು ಉಂಟಾಗುತ್ತವೆ. ಯುವ ವಕೀಲರು ಸಂಚಾರಿ‌ ನಿಯಮ ಪಾಲನೆಯ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಅವರು ತಿಳಿಸಿದರು.


ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂಬ ವಿಚಾರವನ್ನು ತಿಳಿಸಿದ ಅವರು ಜೀವಕ್ಕಿರುವ ಬೆಲೆಯ ಬಗ್ಗೆ ಮತ್ತು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.


ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್‌.ಎಫ್.ಸಿ.ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಪ್ರಭಾರ ಸದಸ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಎನ್. ಅವರು ಮಾತನಾಡಿ, ಸಂಚಾರದ ವೇಳೆ ನಿಯಮ ಪಾಲನೆ ಜೊತೆ ಜಾಗರೂಕತೆಯಿಂದ ಮತ್ತು ನಿಧಾನವಾಗಿ ಚಲಿಸುವ ಬಗ್ಗೆ ತಿಳಿಸಿದರು.


ಬಂಟ್ವಾಳ ವಕೀಲರ ಸಂಘ( ರಿ.) ಇದರ ಅಧ್ಯಕ್ಷ ರಿಚರ್ಡ್ ಕೊಸ್ತಾ ಅವರು ಮಾತನಾಡಿ, ಪ್ರಥಮ್ ನ ಸಾವಿನ ದುಖ:ವನ್ನು ಸಹಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ ಅವರು ಅಂಗಾಗ ದಾನ ಮಾಡಿದ ಯುವ ವಕೀಲ ಪ್ರಥಮ್ ಬಂಗೇರ ಅವರು ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ ಎಂದು ಹೇಳಿದರು.


ಪ್ರತಿಯೊಬ್ಬರೂ ಕೂಡ ಆರೋಗ್ಯ ವಿಮೆಯನ್ನು ಮಾಡಬೇಕೆಂದು ಅವರು ತಿಳಿಸಿದರು. ಇಂತಹ ಅವಘಡಗಳು ಸಂಭವಿಸಿದಾಗ ಆರೋಗ್ಯ ವಿಮೆ ಕುಟುಂಬಕ್ಕೆ ಆಧಾರಸ್ತಂಭವಾಗಬಹುದು ಎಂಬ ಮಾತನ್ನು ಅವರು ಉಲ್ಲೇಖ ಮಾಡಿದರು. ಹಿರಿಯ ಕಿರಿಯ ಹಾಗೂ ಪ್ರಥಮ್ ನ ವಕೀಲ ಸ್ನೇಹಿತರು ನುಡಿ ನಮನ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.
ಗಿರೀಶ್ ಮುಲಿಯಾಲ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *