ಗುರುವಾಯನಕೆರೆ:(ಆ.13) ಬೆಳ್ಳಂಬೆಳಗ್ಗೆ ಗುರುವಾಯನಕೆರೆಯಲ್ಲಿ ಇನೋವಾ ಕಾರಿನಲ್ಲಿ ಹಿಂಸಾತ್ಮಕವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣ ಬುಧವಾರ ನಡೆದಿದೆ. ವಾಹನ ಹಾಗೂ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದನವನ್ನು ಸಾಗಾಟ ಮಾಡುತ್ತಿದ್ದ ವಾಹನದಲ್ಲಿ ಇದ್ದ ಒಬ್ಬನಿಗೆ ಸ್ಥಳದಲ್ಲಿದ್ದವರು ಹಲ್ಲೆ ನಡೆಸಿರುವುದಾಗಿಯೂ ತಿಳಿದು ಬಂದಿದೆ.

ಚಾರ್ಮಾಡಿ ಕಡೆಯಿಂದ ಅತಿಯಾದ ವೇಗದಲ್ಲಿ ಬಂದ ಇನೋವಾ ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದ್ದು ಗುರುವಾಯಕೆರೆಯಲ್ಲಿ ವಾಹನವನ್ನು ತಡೆದಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಸಿಕ್ಕಿಬಿದ್ದವನ ಮೇಲೆ ಹಲ್ಲೆ ಮಾಡಲಾಗಿದೆ.

ಇನೋವಾ ಕಾರಿನಲ್ಲಿ ಮೂರು ದನಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗಾಟ ಮಾಡಲಾಗುತ್ತಿತ್ತು. ಕಾರಿಗೆ ನಕಲಿ ನಂಬರ್ ಪ್ಲೇಟ್ ಅಂಟಿಸಿರುವುದು ಕಂಡುಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

