Sat. Dec 14th, 2024

Ujire: “Bharat Rice” rice sale found on Ujire highway side; Rice seized by lorry from Tahsildar

ಉಜಿರೆ :(ಜು.15) ಇಲ್ಲಿನ ಚಾರ್ಮಾಡಿ ರಸ್ತೆಯ ಹೆದ್ದಾರಿಯ ಬದಿಯಲ್ಲಿ ಪೆಟ್ರೋಲ್ ಪಂಪ್ ಬಳಿ ಹಾವೇರಿ ಮೂಲದ ಅಪರಿಚಿತ ವ್ಯಕ್ತಿಗಳ ತಂಡವೊಂದು ಕರ್ನಾಟಕ ಸರಕಾರದ ಹೆಸರಿನಲ್ಲಿ ಲಾರಿಯಲ್ಲಿ ಸಂಶಯಾಸ್ಪದವಾಗಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ದಂಧೆಯೊಂದು ಸೋಮವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ಚಾರ್ಮಾಡಿ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ಅಪರಿಚಿತರ ತಂಡವೊಂದು ಕರ್ನಾಟಕ ಸರಕಾರ ಫಲಕವಿರುವ ಕೆಎ 27ಸಿ 6204 ನಂಬರಿನ ಲಾರಿಯಲ್ಲಿ ಅಕ್ಕಿ ಗೋಣಿಗಳ ಲೋಡ್ ತಂದು ರಸ್ತೆ ಬದಿ ನಿಲ್ಲಿಸಿ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ವೇಳೆ ಕೃತ್ಯ ಬೆಳಕಿಗೆ ಬಂದಿದೆ.

ಲಾರಿಯಲ್ಲಿ ಲೋಡ್ ತಂದು ಕಾನೂನು ಬಾಹಿರವಾಗಿ ತಲಾ 10 ಕೆಜಿಯ ಬ್ಯಾಗ್‌ನಲ್ಲಿ ಅಕ್ಕಿ ಮಾರುತ್ತಿರುವುದು ಬೆಳಕಿಗೆ ಬಂದಿದೆ. ಮಿನಿ ಮೈಕಿನಲ್ಲಿ ಅಕ್ಕಿ ಮಾರಾಟದ ಪ್ರಚಾರ ಮಾಡಿಕೊಂಡು ಅಲ್ಲಲ್ಲಿ ಲಾರಿ ನಿಲ್ಲಿಸಿ ಅಕ್ಕಿ ಮಾರಾಟ ಮಾಡುತ್ತಿರುವ ತಂಡವನ್ನು ನಾಗರಿಕರು ಗಮನಿಸಿ ವಿಚಾರಿಸಿದಾಗ ದಂಧೆ ಬೆಳಕಿಗೆ ಬಂದಿದೆ. ಇದು ರಾಜ್ಯ ಸರಕಾರ ಬಡವರಿಗಾಗಿ ಜಾರಿಗೊಳಿಸಿರುವ ಅನ್ನಭಾಗ್ಯದ ಅಕ್ಕಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮಾರಾಟ ಮಾಡುತ್ತಿದ್ದ ಅಕ್ಕಿ ಬ್ಯಾಗ್‌ನಲ್ಲಿ 29/-ರೂ.ಗೆ ಅಕ್ಕಿ ಗೋಣಿಯನ್ನು ಮಾರಾಟ ಮಾಡುತ್ತಿದ್ದ ವೇಳೆ ಕೆಲವು ಅಮಾಯಕರು ಮಾಹಿತಿ ಇಲ್ಲದೆ ಅಕ್ಕಿಯನ್ನು ಖರೀದಿಸುತ್ತಿದ್ದರು. ಈ ಸಂದರ್ಭ ಸ್ಥಳದಲ್ಲಿದ್ದ ಕೆಲವರು ಸಂಶಯಗೊಂಡು ಪ್ರಶ್ನಿಸಿದಾಗ ಅಕ್ಕಿ ಮಾರಾಟ ಮಾಡುತ್ತಿದ್ದವರು ಸಂಶಯಾಸ್ಪದವಾಗಿ ಉತ್ತರಿಸಿದ್ದಾರೆ.

ಅಕ್ಕಿಯನ್ನು ಗಮನಿಸಿದಾಗ ಬೇರೆ ಬೇರೆ ಗುಣಮಟ್ಟದ ಎರಡು ಬ್ಯಾಗ್‌ಗಳ ಅಕ್ಕಿ ಇರುವುದನ್ನು ಸ್ಥಳೀಯರು ಗುರುತಿಸಿದ್ದಾರೆ. ಮಾರಾಟ ಮಾಡುತ್ತಿದ್ದ ಅಕ್ಕಿಯ ಅವಧಿಯಲ್ಲೂ ಗೊಂದಲವಿದ್ದು ಅಧಿಕೃತ ಅಕ್ಕಿಯ ಜೊತೆ, ಅನಧಿಕೃತ ಮತ್ತು ಅವಧಿ ದಾಟಿದ ಅಕ್ಕಿಯೂ ಪತ್ತೆಯಾಗಿದೆ.

ಅಕ್ಕಿ ಬ್ಯಾಗ್‌ಗಳು ಭಾರತ್ ರೈಸ್ ಹೆಸರಿನ ಸಂಸ್ಥೆಯ ಹೆಸರಿನದ್ದೆಂದು ಹೇಳಲಾಗುತ್ತಿದ್ದರೂ ಕೆಲವು ಅಕ್ಕಿ ಬ್ಯಾಗ್‌ನಲ್ಲಿ ಸಂಸ್ಥೆಯ ಯಾವುದೇ ಮೊಹರು ಅಥವಾ ಲೋಗೋ ಇಲ್ಲದಿರುವುದು ಹಾಗೂ ಎರಡು ಗುಣಮಟ್ಟದ ಅಕ್ಕಿ ಇರುವುದು ಕಡಿಮೆ ಬೆಲೆ ಮುದ್ರಿಸಿದ್ದು ಹೆಚ್ಚು ಬೆಲೆ ಮಾರಾಟ ಮಾಡುತ್ತಿರುವುದು ನಾಗರಿಕರ ಸಂಶಯಕ್ಕೆ ಕಾರಣವಾಗಿದೆ.

ನಾಗರಿಕರ ದೂರಿನಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಆಹಾರ ನಿರೀಕ್ಷಕರು ಸ್ಥಳಕ್ಕಾಗಮಿಸಿ ಅಕ್ಕಿ ಮತ್ತು ಲಾರಿಯನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಸಂಶಯಾಸ್ಪದ ಅಕ್ಕಿ ಮಾರಾಟ ಪ್ರಕರಣದ ಹೆಚ್ಚಿನ ಮಾಹಿತಿ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು