ಆಗ್ರಾ (ಫೆ.08): ಶುಕ್ರವಾರ ಆಗ್ರಾದಲ್ಲಿ ನಡೆದ ಪ್ಯಾರಾಚೂಟ್ ತರಬೇತಿ ವೇಳೆ ಕರ್ನಾಟಕ ಮೂಲದ ವಾಯುಪಡೆಯ ವಾರಂಟ್ ಅಧಿಕಾರಿ ಮಂಜುನಾಥ್ ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ನಡೆದಿದೆ. ವಾರಂಟ್ ಅಧಿಕಾರಿ ಮಂಜುನಾಥ್, ವಿಂಗ್ ಕಮಾಂಡರ್ ರೋಹಿತ್ ದಹಿಯಾ ಸೇರಿದಂತೆ 12 ತರಬೇತಿದಾರರು ಬೆಳಿಗ್ಗೆ 8:30ಕ್ಕೆ ವಾಯುಪಡೆಯ ವಿಮಾನದಿಂದ ತರಬೇತಿಯ ಭಾಗವಾಗಿ ಕೆಳಗೆ ಹಾರಿದ್ದರು.

ಇದನ್ನೂ ಓದಿ: ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ
ಈ ಪೈಕಿ 11 ಮಂದಿ ಸುರಕ್ಷಿತವಾಗಿ ಇಳಿದಿದ್ದರು. ಆದರೆ ಮಂಜುನಾಥ್ ಮಾತ್ರ ಕೆಳಗಿಳಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮೀಪದ ಪ್ರದೇಶಗಳಲ್ಲಿ ತಪಾಸಣೆ ನಡೆಸಿದಾಗ ಗೋಧಿ ಹೊಲದಲ್ಲಿ ಮಂಜುನಾಥ್ ಶವ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆ ವೇಳೆ ಪ್ಯಾರಾಚೂಟ್ ಬಿಚ್ಚಿಕೊಳ್ಳದೇ ಅವರು 1500 ಅಡಿ ಎತ್ತರದಿಂದ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ವಿಮಾನದಿಂದ ಹಾರಿದ 5 ಸೆಕೆಂಡ್‌ನಲ್ಲಿ ಪ್ಯಾರಾಚೂಟ್ ತಂತಾನೆ ಬಿಚ್ಚಿಕೊಳ್ಳಬೇಕು. ಅದು ಆಗದೇ ಹೋದಲ್ಲಿ, ತುರ್ತು ಸಂದರ್ಭಕ್ಕೆಂದು ಮೀಸಲಿಟ್ಟ ಇನ್ನೊಂದು ಪ್ಯಾರಾಚೂಟ್ ಅನ್ನು ಸ್ವತಃ ತೆರೆಯಬೇಕಾಗುತ್ತದೆ.




ಆದರೆ ಅದು ಕೂಡಾ ತೆರೆಯದೇ ಇದ್ದ ಪರಿಸ್ಥಿತಿಯಲ್ಲಿ ಘಟನಾ ಸ್ಥಳದಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. ಮಂಜುನಾಥ್ ಕರ್ನಾಟಕದವರಾಗಿದ್ದು, ಆಗ್ರಾ ಏರ್ಫೋರ್ಸ್ ಬೇಸ್‌ನಲ್ಲಿ ಕರ್ತವ್ಯದಲ್ಲಿದ್ದರು. ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದು ಮಲ್ಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.
