ಮಂಗಳೂರು : ಮಂಗಳೂರಿನಲ್ಲಿ ಮಾನವೀಯತೆ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ತಿಂಡಿ ಮತ್ತು ಹಣದ ಆಸೆ ತೋರಿಸಿ 9 ವರ್ಷದ ಪುಟ್ಟ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ದಿನಾಂಕ 18-03-2026 ರಂದು ನೀಡಲಾದ ದೂರಿನ ಮೇರೆಗೆ, ಆರೋಪಿಯು ಬಾಲಕನನ್ನು ಹಣ ಹಾಗೂ ತಿಂಡಿ ನೀಡುವ ನೆಪದಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ತಿಳಿದುಬಂದಿದೆ. ಅಲ್ಲದೆ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅಸಭ್ಯ ಕ್ರಿಯೆಗಳಿಗೆ ಪ್ರೇರೇಪಿಸಿರುವುದೂ ತನಿಖೆಯಲ್ಲಿ ಬಹಿರಂಗವಾಗಿದೆ.



ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ POCSO ಕಾಯ್ದೆಯ ಸೆಕ್ಷನ್ 4, 6, 12 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯ ಸೆಕ್ಷನ್ 75 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.








