ಸುಳ್ಯ: ಜೇಬಿನಲ್ಲಿದ್ದ ಮೊಬೈಲ್ ಫೋನ್ ಏಕಾಏಕಿ ಸ್ಫೋಟಗೊಂಡು ಯುವಕನೊಬ್ಬ ಗಾಯಗೊಂಡಿರುವ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ನಡೆದಿದೆ.

ಕಲ್ಮಕಾರಿನ ನಿವಾಸಿ ಗುರುಪ್ರಸಾದ್ ನಿಡುಬೆ ಎಂಬುವವರೇ ಮೊಬೈಲ್ ಸ್ಫೋಟದಿಂದ ಗಾಯಗೊಂಡ ದುರ್ದೈವಿ. ಗುರುಪ್ರಸಾದ್ ಅವರು ತಮ್ಮ ವಿವೋ ವೈ 100 ಎ (Vivo Y100A) ಮಾದರಿಯ ಮೊಬೈಲ್ ಅನ್ನು ಪ್ಯಾಂಟ್ನ ಕಿಸೆಯಲ್ಲಿ ಇಟ್ಟುಕೊಂಡಿದ್ದರು.

ಈ ವೇಳೆ ಯಾವುದೇ ಮುನ್ಸೂಚನೆ ಇಲ್ಲದೆ ಮೊಬೈಲ್ ಏಕಾಏಕಿ ಸ್ಫೋಟಗೊಂಡಿದೆ. ಮೊಬೈಲ್ ಸ್ಫೋಟಗೊಂಡ ರಭಸಕ್ಕೆ ದೊಡ್ಡ ಶಬ್ದ ಕೇಳಿಬಂದಿದ್ದು, ತಕ್ಷಣವೇ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಸ್ಫೋಟದ ವೇಳೆ ಬೆಂಕಿ ಕಾಣಿಸಿಕೊಳ್ಳದಿದ್ದರೂ, ಬ್ಯಾಟರಿ ಭಾಗ ಸಂಪೂರ್ಣವಾಗಿ ಸುಟ್ಟು ಕಪ್ಪಾಗಿದೆ.


ಮೊಬೈಲ್ ಇರಿಸಿದ್ದ ಜಾಗದಲ್ಲಿ ಗುರುಪ್ರಸಾದ್ ಅವರ ತೊಡೆ ಭಾಗದ ಚರ್ಮ ಸುಟ್ಟು ಹೋಗಿದ್ದು, ತೀವ್ರ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ಪ್ಯಾಂಟ್ ಕೂಡ ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.









