ಉಡುಪಿ: ಉಡುಪಿ ಜಿಲ್ಲೆಯ ಜಡ್ಕಲ್ ಗ್ರಾಮದಲ್ಲಿ ಮಧ್ಯಾಹ್ನದ ಮೋಜು ವಿಧಿಯಾಟವಾಗಿ ಪರಿಣಮಿಸಿದೆ. ಗೆಳೆಯರೊಂದಿಗೆ ಸೇರಿ ಹೊಳೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋವಿಂದ ತೀರ್ಥ ಹೊಳೆಯ ಕಿಳಿನಗುಂಡಿ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಸಂದೀಪ್ (28) ಎಂದು ಗುರುತಿಸಲಾಗಿದೆ. ಮಾರ್ಚ್ 22ರಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಸಂದೀಪ್ ತನ್ನ ಸ್ನೇಹಿತರ ತಂಡದೊಂದಿಗೆ ಜಡ್ಕಲ್ನ ಗೋವಿಂದ ತೀರ್ಥ ಹೊಳೆಗೆ ಸ್ನಾನ ಮಾಡಲು ತೆರಳಿದ್ದರು.ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಸ್ನೇಹಿತರೊಂದಿಗೆ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ಆಳವಾದ ಜಾಗಕ್ಕೆ ಹೋಗಿ ಈಜಲು ಆಗದೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸಂದೀಪ್ ಮುಳುಗಿದ ಬಳಿಕ ಜೊತೆಯಲ್ಲಿದ್ದ ಸ್ನೇಹಿತರು ಹಾಗೂ ಸ್ಥಳೀಯರ ಸಹಕಾರದಿಂದ ಹೊಳೆಯಲ್ಲಿ ಹುಡುಕಾಟ ನಡೆಸಲಾಗಿದ್ದು, ಬಳಿಕ ಮೃತದೇಹ ಪತ್ತೆಯಾಗಿದೆ. ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.





