Karkala: ಕಾರ್ಕಳದಲ್ಲಿ ಭೀಕರ ಅಪಘಾತ – ಟಿಪ್ಪರ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸಾವು!

ಕಾರ್ಕಳ: ಕಾರ್ಕಳದ ಪಳ್ಳಿ ಅಡಪಾಡಿ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅತೀ ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಹಿರಿಯಡ್ಕದ ಕುಜಂಬೈಲು ನಿವಾಸಿ, 27 ವರ್ಷದ ಗಣೇಶ್ ನಾಯಕ್ ಎಂದು ಗುರುತಿಸಲಾಗಿದೆ. ಗಣೇಶ್ ಅವರು ತಮ್ಮ ಬೈಕ್‌ನಲ್ಲಿ ಹಂಪನಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಡಪಾಡಿ ಸಮೀಪ ಹಿಂಬದಿಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿಯು ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಗಣೇಶ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ದುರದೃಷ್ಟವಶಾತ್, ಗಣೇಶ್ ಅವರು ಹೆಲ್ಮೆಟ್ ಧರಿಸಿದ್ದರೂ ಸಹ, ಟಿಪ್ಪರ್‌ನ ಹಿಂಬದಿಯ ಚಕ್ರ ಅವರ ತಲೆಯ ಮೇಲೆಯೇ ಹರಿದಿದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಗಣೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದು, ಟಿಪ್ಪರ್ ಚಾಲಕನ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾರ್ಕಳ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Recent posts

Discover more from U Plus TV

Subscribe now to keep reading and get access to the full archive.

Continue reading