ಉಜಿರೆ: ಖ್ಯಾತ ಶಿಕ್ಷಣ ಸಂಸ್ಥೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನಲ್ಲಿ ಇದೇ ಬರುವ ಮಾರ್ಚ್ 29, ಭಾನುವಾರದಂದು ವೈಭವದ ‘ಹಳೆಯ ವಿದ್ಯಾರ್ಥಿಗಳ ದಿನಾಚರಣೆ’ (Alumni Day) ಆಯೋಜಿಸಲಾಗಿದೆ. ಕಾಲೇಜಿನ ಕ್ವಾಡ್ರಾಂಗಲ್ ಆವರಣದಲ್ಲಿ ಸಂಜೆ 5.30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.

ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು ಹಮ್ಮಿಕೊಳ್ಳಲಾಗಿರುವ ಈ ಸಮಾರಂಭಕ್ಕೆ ಗಣ್ಯರ ತಾರಾಗಣವೇ ಆಗಮಿಸಲಿದೆ.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಖ್ಯಾತ ಮಾಧ್ಯಮ ಹಾಗೂ ಪಿಆರ್ ವೃತ್ತಿಪರರಾದ ಇವರು, ನಗರ ತೋಟಗಾರಿಕಾ ತಜ್ಞ ಶ್ರೀ ಮಂಜುನಾಥ್ ಕನ್ಯಾಡಿ & ಬೆಂಗಳೂರಿನ ಕ್ವೆಸ್ಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ರಾಮಮೋಹನ ಕೋಟೆ ಭಾಗವಹಿಸಲಿದ್ದಾರೆ.ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್. ಅವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಪೀತಾಂಬರ ಹೇರಾಜೆ ಅವರು ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಸಂಜೆ 6.15ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿವೆ. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಬೆಂಗಳೂರಿನ ಖ್ಯಾತ ‘ವೇಕ್ ಅಪ್ ದ ಬ್ಯಾಂಡ್’ (Wake Up The Band) ತಂಡದಿಂದ ಲೈವ್ ಮ್ಯೂಸಿಕ್ ಕನ್ಸರ್ಟ್ ನಡೆಯಲಿದೆ.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪೈ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದದವರು ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

“ನಿಮ್ಮ ಹಳೆಯ ಗೆಳೆಯರನ್ನು ಭೇಟಿಯಾಗಲು, ನೆನಪುಗಳ ಸಾಗರದಲ್ಲಿ ತೇಲಲು ತಪ್ಪದೇ ಈ ಕಾರ್ಯಕ್ರಮಕ್ಕೆ ಆಗಮಿಸಿ” ಎಂದು ಆಯೋಜಕರು ಪ್ರೀತಿಯ ಆಮಂತ್ರಣ ನೀಡಿದ್ದಾರೆ.





