ಬೆಂಗಳೂರು : ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಪ್ರೀತಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯನ್ನೇ ಯುವಕನೊಬ್ಬ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಅನುಮಾನದ ಭೂತಕ್ಕೆ ಬಲಿಯಾದ ಅಪ್ರಾಪ್ತೆಯ ಕರುಣಾಜನಕ ಕಥೆ ಇದು.

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಬೆಂಗಳೂರಿನ ತನ್ನ ಸಂಬಂಧಿಕರ ಮನೆಗೆ ಆಗಾಗ ಬರುತ್ತಿದ್ದಳು. ಈ ವೇಳೆ ಡಿ.ಜೆ. ಹಳ್ಳಿಯ ಈರುಳ್ಳಿ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಶಬೀಲ್ ಎಂಬಾತನ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಇವರ ವಿಷಯ ತಿಳಿದ ಪೋಷಕರು, ವಿರೋಧಿಸುವ ಬದಲು ಈ ಜೋಡಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಕಳೆದ ಜೂನ್ 2025ರಲ್ಲಿ ಇಬ್ಬರಿಗೂ ಅದ್ದೂರಿಯಾಗಿ ನಿಶ್ಚಿತಾರ್ಥವೂ ನಡೆದಿತ್ತು. ಮದುವೆಗೆ ತಯಾರಿ ನಡೆಯುತ್ತಿರುವಾಗಲೇ ಆರೋಪಿ ಶಬೀಲ್ ತಲೆಯಲ್ಲಿ ಅನುಮಾನದ ಭೂತ ಹೊಕ್ಕಿತ್ತು. ಅಪ್ರಾಪ್ತೆಯ ಮೇಲೆ ವಿನಾಕಾರಣ ಶಂಕೆ ವ್ಯಕ್ತಪಡಿಸುತ್ತಿದ್ದ ಈತ, ಆಕೆಯನ್ನು ಮುಗಿಸಲು ಸಂಚು ರೂಪಿಸಿದ್ದ.


ಶಬೀಲ್ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಸಕ್ಕರೆ ಮಂಡಿ ಪಾಳು ಬಿದ್ದ ಜಾಗದಲ್ಲಿ ಆರೋಪಿ ಶಬೀಲ್ ಮತ್ತು ಅಪ್ರಾಪ್ತ ಯುವತಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಅದೇ ಜಾಗಕ್ಕೆ ಯುವತಿಯನ್ನು ಈತ ಕರೆದಿದ್ದ. ಹೀಗಾಗಿ ಮನೆಯಲ್ಲೇ ಮೊಬೈಲ್ ಬಿಟ್ಟು ಆಕೆ ಶಬೀಲ್ನ ಭೇಟಿಗಾಗಿ ತೆರಳಿದ್ದಳು.


ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದ ಯುವತಿ 10.30 ಆದರೂ ಬಾರದ ಕಾರಣ ಸಂಬಂಧಿಕರ ಮನೆಯವರು ಹುಡುಕಾಟ ಆರಂಭಿಸಿದ್ದರು. ಶಬೀಲ್ಗೆ ಕರೆ ಮಾಡಿದರೂ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಆತನ ಮನೆಯವರ ಬಳಿ ವಿಚಾರಿಸಿದಾಗ ಅವರಿಬ್ಬರು ಭೇಟಿ ಆಗ್ತಿದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು. ಒಟ್ಟಿನಲ್ಲಿ ಮದುವೆಯಾಗಿ ಸುಂದರ ಜೀವನ ನಡೆಸುವ ಕನಸು ಕಂಡಿದ್ದ ಯುವತಿಯನ್ನು ತನ್ನ ಅನುಮಾನದ ಭೂತಕ್ಕೆ ಆರೋಪಿ ಶಬೀಲ್ ಬಲಿ ಪಡೆದಿರೋದು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿರೋದಂತೂ ಸತ್ಯ.





