ಉಜಿರೆ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಶಿವಾನಂದ ತಗಡೂರು ಅವರನ್ನು ದೇವಸ್ಥಾನದ ಅನುವಂಶಿಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಆತ್ಮೀಯವಾಗಿ ಗೌರವಿಸಿದರು

ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಹಾಗೂ ಅಧ್ಯಕ್ಷ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಅವರು ಬ್ರಹ್ಮ ಕಲಶೋತ್ಸವ ಸಮಿತಿ ವತಿಯಿಂದ ಗೌರವಿಸಿದರು.

ಇದೇ ವೇಳೆ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ಸುಪ್ರಸಾದ’ ಭೋಜನ ಶಾಲೆಗೆ ಭೇಟಿ ನೀಡಿದ ಶಿವಾನಂದ ತಗಡೂರು, ಅಲ್ಲಿನ ವ್ಯವಸ್ಥಿತ ಕಾರ್ಯವೈಖರಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆಯಾಗುತ್ತಿರುವ ವೈಖರಿಯನ್ನು ಅವರು ಶ್ಲಾಘಿಸಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯ ಭುವನೇಶ್ ಗೇರುಕಟ್ಟೆ, ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ತಂಗಡಿ ಘಟಕದ ಅಧ್ಯಕ್ಷ ತುಕಾರಾಮ್, ಸಂಘದ ಸದಸ್ಯರಾದ ಶ್ರೀನಿವಾಸ ತಂತ್ರಿ, ಬಿ.ಎಸ್. ಕುಲಾಲ್, ದಿನೇಶ್ ಕೋಟ್ಯಾನ್, ಜಾರಪ್ಪ ಪೂಜಾರಿ ಉಪಸ್ಥಿತರಿದ್ದರು.

ಉಜಿರೆಯ ಈ ಧಾರ್ಮಿಕ ಉತ್ಸವಕ್ಕೆ ಪತ್ರಕರ್ತರ ಸಂಘದ ನಾಯಕರ ಭೇಟಿ ವಿಶೇಷ ಮೆರುಗು ನೀಡಿತು.








