ಕಡಬ: ಪ್ರೀತಿ ಹೆಸರಲ್ಲಿ ನಂಬಿಸಿ, ಮದುವೆ ಮಾತುಕತೆಗೆ ಬಂದಾಗ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರಿನಲ್ಲಿ ನಡೆದಿದೆ.

ಸಂತ್ರಸ್ತ ಮಹಿಳೆ ದೇವಸ್ಥಾನವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರಿಗೆ ಪ್ರಭಾಕರ ಎಂಬಾತನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು. ಇದೇ ನಂಬಿಕೆಯ ಮೇಲೆ ಏಪ್ರಿಲ್ 3ರಂದು ರಾತ್ರಿ ಮಹಿಳೆಯು ಐತ್ತೂರು ಗ್ರಾಮದ ನೆಲ್ಲಿಕಟ್ಟೆಯಲ್ಲಿರುವ ಪ್ರಭಾಕರನ ಮನೆಗೆ ಮದುವೆ ಬಗ್ಗೆ ಮಾತನಾಡಲು ತೆರಳಿದ್ದರು.
ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ವ್ಯಕ್ತಿಯನ್ನು ಮದುವೆ ಬಗ್ಗೆ ಚರ್ಚಿಸಲು ಹೋದ ಮಹಿಳೆಗೆ ಈಗ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರುವ ಪರಿಸ್ಥಿತಿ ಬಂದಿದೆ.


ಮನೆಯಲ್ಲಿ ಮಾತುಕತೆ ನಡೆಯುತ್ತಿದ್ದಾಗಲೇ ಹಠಾತ್ ವಿಕೋಪಕ್ಕೆ ತಿರುಗಿದ ಪ್ರಭಾಕರ, ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ ಆಕೆಯನ್ನು ಕೆಳಗೆ ತಳ್ಳಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಮಹಿಳೆಯ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಓಡಿ ಬಂದಾಗ, “ಇನ್ನೊಮ್ಮೆ ನನ್ನ ಸುದ್ದಿಗೆ ಬಂದರೆ ಸುಮ್ಮನೆ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಸದ್ಯ ಸಂತ್ರಸ್ತೆಯ ದೂರಿನ ಮೇರೆಗೆ ಕಡಬ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಆರೋಪಿ ಪ್ರಭಾಕರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 115(2), 352, 74, ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



