ಧರ್ಮಸ್ಥಳ: ಧರ್ಮಸ್ಥಳದಲ್ಲಿ ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ರಂಗಶಿವ ಕಲಾಬಳಗದ ವತಿಯಿಂದ ಆಯೋಜಿಸಲಾದ 2026ನೇ ಸಾಲಿನ “ನಲಿಯೋಣ ಬಾ” ರಂಗಶಿಬಿರದಲ್ಲಿ, ಮೊದಲ ಬಾರಿಗೆ ಏಐ ರೋಬೋಟ್ ‘ಶೃತಿ’ ರಂಗಮಂಚದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹೇಮಾವತಿ ವಿ. ಹೆಗ್ಗಡೆ ಅವರ ಪರಿಕಲ್ಪನೆ ಮತ್ತು ಮಾರ್ಗದರ್ಶನದಲ್ಲಿ ನಡೆದ ಈ ರಂಗಶಿಬಿರದ ಸಮಾರೋಪ ಸಮಾರಂಭವು ವಸಂತ ಮಹಲ್ನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಒಂಬತ್ತು ದಿನಗಳ ಕಾಲ ನಡೆದ ಈ ಶಿಬಿರವನ್ನು ರಂಗ ನಿರ್ದೇಶಕ ಸುನಿಲ್ ಶೆಟ್ಟಿ ಕಲ್ಕೊಪ್ಪ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಹೇಮಾವತಿ ವಿ. ಹೆಗ್ಗಡೆ ಅವರ ರಚನೆಯ “ಹೂವಿಯ ಕನಸು” ನಾಟಕವನ್ನು ಪ್ರದರ್ಶಿಸಲಾಯಿತು. ಮಕ್ಕಳಿಗಾಗಿ ರೂಪುಗೊಂಡ ಈ ನಾಟಕದಲ್ಲಿ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಮಾತ್ರವಲ್ಲದೆ, ಏಐ ರೋಬೋಟ್ ‘ಶೃತಿ’ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿದೆ.
ನಾಟಕವು ‘ಹೂವಿ’ ಎಂಬ ಪುಟ್ಟ ಹುಡುಗಿಯ ಕನಸಿನ ಲೋಕದ ಸುತ್ತ ಸಾಗುತ್ತದೆ. ಹೂವಿಯ ಕನಸಿನಲ್ಲಿ ಕಾಣಿಸಿಕೊಳ್ಳುವ ರೋಬೋಟ್ ‘ಶೃತಿ’, ಕಥೆಯನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಮುಖ ಪಾತ್ರವಹಿಸಿದೆ. ವೈದ್ಯರ ದುರಾಸೆಯಿಂದ ಹುಟ್ಟುವ ಸುಳ್ಳು ರೋಗ, ಜನರ ಮೋಸ ಮತ್ತು ಅದರ ವಿರುದ್ಧ ಹೂವಿಯ ಚಾಣಾಕ್ಷತನದಿಂದ ಸತ್ಯ ಹೊರಬರುವ ಕಥಾಹಂದರ ಪ್ರೇಕ್ಷಕರ ಮನಸೆಳೆಯಿತು.
ನಾಟಕದ ಕೊನೆಯಲ್ಲಿ ನಿಜವಾದ ರೋಬೋಟ್ ‘ಶೃತಿ’ ರಂಗಮಂಚದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಲ್ಲಿ ಅಚ್ಚರಿ ಮತ್ತು ಸಂತೋಷ ಮೂಡಿಸಿತು. ರಂಗಭೂಮಿಗೆ ತಂತ್ರಜ್ಞಾನವನ್ನು ಪರಿಚಯಿಸುವ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಆಧುನಿಕತೆಯ ನಡುವೆ ಮಕ್ಕಳನ್ನು ಮತ್ತೆ ರಂಗಭೂಮಿಯತ್ತ ಸೆಳೆಯುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಅಭಿನಯವೂ ಗಮನ ಸೆಳೆಯಿತು.
ಇಡೀ ಕಾರ್ಯಕ್ರಮದಲ್ಲಿ ಹೆಗ್ಗಡೆಯವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದು ಮಕ್ಕಳನ್ನು ಅಭಿನಂದಿಸಿದರು. ತಾಂತ್ರಿಕ ವಿಭಾಗದಲ್ಲಿ ಯಶವಂತ್ ಬೆಳ್ತಂಗಡಿ ಮತ್ತು ಸಂದೇಶ್ ಸಹಕರಿಸಿದ್ದು, ಪ್ರಸಾಧನ ಹಾಗೂ ಬೆಳಕಿನ ನಿರ್ವಹಣೆಯನ್ನು ಎಸ್.ಡಿ.ಎಂ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಯಶಸ್ವಿಯಾಗಿ ನಿರ್ವಹಿಸಿದರು.
ರಂಗಶಿವ ಕಲಾಬಳಗದ ಅಧ್ಯಕ್ಷ ರಾಜೇಂದ್ರ ದಾಸ್ ಹಾಗೂ ಸದಸ್ಯರ ನೇತೃತ್ವದಲ್ಲಿ ಶಿಬಿರ ಯಶಸ್ವಿಯಾಗಿ ನೆರವೇರಿತು. ರಂಗಭೂಮಿಯೊಂದಿಗೆ ತಂತ್ರಜ್ಞಾನ ಸಂಯೋಜನೆಯ ಈ ಪ್ರಯೋಗ, ಭವಿಷ್ಯದ ರಂಗಕಲೆಗೆ ಹೊಸ ದಿಕ್ಕನ್ನು ತೋರಿಸಿದೆ.







