ಬಂಟ್ವಾಳ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರಿಬೆಟ್ಟು ನಿವಾಸಿ ಕುಂಞಣ್ಣ ಮಣಿಯಾಣಿ ಅವರ ಪುತ್ರ ಹರ್ಷಿತ್ ಮಣಿಯಾಣಿ (29) ಶನಿವಾರ ಬೆಳಿಗ್ಗೆ ತಮ್ಮ ಮನೆಯ ಹಿಂಭಾಗದ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಶುಕ್ರವಾರ ರಾತ್ರಿ ಮನೆಯವರೊಂದಿಗೆ ಊಟ ಮಾಡಿ ಹೊರಾಂಗಣದಲ್ಲಿ ಮಲಗಿದ್ದ ಹರ್ಷಿತ್, ಶನಿವಾರ ಬೆಳಿಗ್ಗೆ ಮನೆಯವರು ನೋಡುವಾಗ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮನೆಯ ಹಿಂಭಾಗದ ಗುಡ್ಡದ ಮರವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ಯುವಕ ತಂದೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯೊಂದಿಗೆ ವಾಸವಾಗಿದ್ದರು. ಇಬ್ಬರು ಸಹೋದರಿಯರಿಗೆ ಈಗಾಗಲೇ ವಿವಾಹವಾಗಿದೆ. ಆಘಾತದ ಮೇಲೆ ಆಘಾತವೆಂಬಂತೆ, ಹರ್ಷಿತ್ ಅವರ ತಂದೆಯ ಸಹೋದರಿಯ ಪುತ್ರ ಕೂಡ ಹಲವಾರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಇದೇ ಏಪ್ರಿಲ್ 23ರಂದು ಅವರ ತಂದೆಯ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ ನಿಗದಿಯಾಗಿದ್ದು, ಈಗಾಗಲೇ ಗೊನೆ ಮುಹೂರ್ತವೂ ನೆರವೇರಿತ್ತು. ಶುಭ ಕಾರ್ಯದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಮಗನ ಸಾವು ಬರಸಿಡಿಲು ಬಡಿದಂತಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.







