ಬಂಟ್ವಾಳ : ತುಂಬೆಯ ಬಂಟರ ಭವನದಲ್ಲಿ ಆಯೋಜಿಸಿದ್ದ ಬಂಟ್ವಾಳದ ನರ್ವಲ್ದಡ್ಡ ನಿವಾಸಿ ಮೋಹನ್ ಶೆಟ್ಟಿ ನರ್ವಲ್ದಡ್ಡ ಮತ್ತು ಹರಿಣಾಕ್ಷಿ ಎಂ ಶೆಟ್ಟಿ ದಂಪತಿಗಳ ಪುತ್ರಿ ವಿದುಷಿ ಸಹನಾ ಎಂ. ಶೆಟ್ಟಿ ನರ್ವಲ್ದಡ್ಡ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಅಭೂತಪೂರ್ವವಾಗಿ ನಡೆಯಿತು.
ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಕುಮಾರಿ ಸಹನಾ ಎಂ. ಶೆಟ್ಟಿ ಸುಮಾರು 3 ಗಂಟೆಗಳ ನಿರಂತರ ನೃತ್ಯ ಸೇವೆಯನ್ನು ಪ್ರದರ್ಶಸುವ ಮೂಲಕ ಭರತನಾಟ್ಯ ರಂಗಪ್ರವೇಶ ಪಡೆದರು. ಈ ಸಂದರ್ಭದಲ್ಲಿ ಭರತನಾಟ್ಯದ ಸಂಕೀರ್ಣ ಭಾಗಗಳಾದ ವರ್ಣಂ, ಪದಂ ಮತ್ತು ತಿಲ್ಲಾನಗಳನ್ನು ಅತ್ಯಂತ ಸುಲಲಿತವಾಗಿ ಹಾಗೂ ಲಯಬದ್ಧವಾಗಿ ಪ್ರದರ್ಶಿಸಿದರು. ಸಹನಾಳ ಮನೋಜ್ಞ ಹಾವಭಾವ ಮತ್ತು ಪಾದಚಲನೆಯನ್ನು ಕಂಡು ಕಲಾ ವಿಮರ್ಶಕರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಕಾರ್ಯಕ್ರಮವನ್ನು ಪುತ್ತೂರಿನ ‘ವಿಶ್ವಕಲಾನಿಕೇತನ’ ಇದರ ನಿರ್ದೇಶಕರು ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ವಿಜೇತರಾಗಿರುವ ವಿದುಷಿ ನಯನ ವಿ. ರೈ ನಟರಾಜ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ದೀಪ ಪ್ರಜ್ವಲಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿದ್ದ ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಕಲೆ ಎಂಬುದು ದೈವದತ್ತವಾದ ಕೊಡುಗೆ. ಭರತನಾಟ್ಯದಂತ ಭಾರತೀಯ ಕಲೆ ಈ ನೆಲದ ಸಾಂಸ್ಕೃತಿಕ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಶಾಸ್ತ್ರೀಯ ಕಲೆಗಳು ಮನುಷ್ಯನ ಮನಸ್ಸನ್ನು ಕೇಂದ್ರೀಕರಿಸುವ ಜೊತೆಗೆ ಆಧ್ಯಾತ್ಮಿಕ ಉನ್ನತಿಯತ್ತ ಕೊಂಡೊಯ್ಯುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ಯುವ ಪೀಳಿಗೆ ಭಾರತೀಯ ಪರಂಪರೆಯನ್ನು ಬೆಳೆಸಿ ಪ್ರೇರೆಪಿಸಿತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಕುಮಾರಿ ಸಹನಾಳು ಬಹುಮುಖ ಪ್ರತಿಭೆಯಾಗಿದ್ದು, ಆಕೆಯ ನೃತ್ಯದಲ್ಲಿನ ಏಕಾಗ್ರತೆ ಮತ್ತು ಸಮರ್ಪಣಾ ಭಾವ ಕಲಾ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಸಲಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯಕ್ಷದ್ರುವ ಪಟ್ಲ ಫೌಂಡೇಶನ್ ನ ಸ್ಥಾಪಕ ಅಧ್ಯಕ್ಷ ಪಟ್ಲಗುತ್ತು ಶ್ರೀ ಸತೀಶ್ ಶೆಟ್ಟಿ ಮಾತನಾಡಿ, ಕಲೆಗೆ ಯಾವುದೇ ಜಾತಿ, ಮತದ ಹಂಗಿಲ್ಲ. ಕಲೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗ. ಇದಕ್ಕೆ ಸರ್ವರನ್ನೂ ಒಗ್ಗೂಡಿಸುವ ಶಕ್ತಿ ಹೊಂದಿದೆ. ಸಹನಾಳ ಪ್ರತಿಭೆ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಗ್ರಾಮದವರು ಮತ್ತು ಕುಟುಂಬಸ್ಥರಿಗೆ ಹೆಮ್ಮೆ ತರಿಸಿದೆ. ರಂಗಪ್ರವೇಶವು ಕಲಾವಿದೆಯ ಆರಂಭದ ಹೆಜ್ಜೆಯ ಮೈಲಿಗಲ್ಲು. ಇದು ನಿರಂತರ ಕಲಾ ಸಾಧನೆಯ ಹಾದಿಯಲ್ಲಿ ಸಾಗುವಂತೆ ಪ್ರೇರೆಪಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದರ ಜೊತೆಗೆ ಭಾರತೀಯ ಕಲೆ ಮತ್ತು ಆಚರಣೆಯನ್ನು ಅನುಸರಿಸುವಂತೆ ಪ್ರೋತ್ಸಾಹ ನೀಡಿದಾಗ ಮಾದರಿಯ ಸಮಾಜ ನಿರ್ಮಾಣವಾಗುತ್ತದೆ ಎಂದು ಕಲಾ ಪ್ರೇಮವನ್ನು ಮೆಚ್ಚಿಕೊಂಡರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಮಾತನಾಡಿ, ತುಳುನಾಡಿನ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದು ಸಂತಸದ ಸಂಗತಿ. ಬಂಟ್ವಾಳ ತಾಲೂಕು ಸಾಂಸ್ಕೃತಿಕವಾಗಿ ಶ್ರೀಮಂತವಾಗುತ್ತಿದೆ. ಈ ದಿನ ನಡೆದ ವಿದುಷಿ ಸಹನಾ ಎಂ. ಶೆಟ್ಟಿಯವರ ರಂಗಪ್ರವೇಶವು ನಮ್ಮ ಭಾಗದ ಕಲಾ ಇತಿಹಾಸ ಮತ್ತು ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ತಂದಿದೆ. ಯುವ ಕಲಾವಿದರಿಗೆ ತಾಲೂಕಿನ ಸಂಘದ ಪ್ರೋತ್ಸಾಹ ಮತ್ತು ಸಹಕಾರ ಸದಾ ಇರುತ್ತದೆ ಎಂದು ಸರ್ವರ ಸಮ್ಮುಖದಲ್ಲಿ ಭರವಸೆ ನೀಡಿದರು.
ಕಲಾ ಪ್ರದರ್ಶನದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಮಾರಿ ಸಹನಾ ತನ್ನ ಗುರುಗಳಾದ ಮಡಂತ್ಯಾರಿನ ದೇವಿ ಕಿರಣ್ ಕಲಾನಿಕೇತನ್ ಇದರ ನಿರ್ದೇಶಕಿಯಾದ ವಿದುಷಿ ಸ್ವಾತಿ ಜಯರಾಮ್ ಮತ್ತು ವಿದುಷಿ ಪೃಥ್ವಿ ಸತೀಶ್ ರವರಿಗೆ ಭಕ್ತಿಪೂರ್ವಕವಾಗಿ ‘ಗುರುವಂದನೆ’ ಸಲ್ಲಿಸಿದರು.
ಕಾರ್ಯಕ್ರಮದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪುತ್ತೂರಿನ ವಿದ್ಯಾ ವರ್ಧಕ ಸಂಸ್ಥೆಯ ಸಂಚಾಲಕ ರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದ ಸಂಯೋಜಕರಾದ ಮೋಹನ್ ಶೆಟ್ಟಿ, ಹರಿಣಾಕ್ಷಿ ಮತ್ತು ಮೋಕ್ಷಿತ್ ಎಂ. ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಹಾಸ ಡಿ. ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಡಾ. ಮಂಜುಳಾ ಶೆಟ್ಟಿ ನಿರೂಪಿಸಿ, ಪುನೀತ್ ಶೆಟ್ಟಿ ವಂದಿಸಿದರು.







