ಕಡಬ: ಆಸ್ತಿ ವಿಚಾರ ಹಾಗೂ ಬೋರ್ವೆಲ್ನಲ್ಲಿ ನೀರು ಸಿಕ್ಕಿದ್ದಕ್ಕೆ ಅಸೂಯೆಗೊಂಡ ಮೈದುನನೊಬ್ಬ ಅತ್ತಿಗೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಕಡಬ ತಾಲೂಕಿನ ಐತ್ತೂರು ಗ್ರಾಮದ ಪಾದೆಮಜಲು ಎಂಬಲ್ಲಿ ಬುಧವಾರ ನಡೆದಿದೆ.
ಐತ್ತೂರು ಗ್ರಾಮದ ಪಾದೆಮಜಲು ನಿವಾಸಿ ಬೇಬಿ ಕೆ.ಎಸ್ (35) ಎಂಬುವವರೇ ಕೊಲೆ ಯತ್ನಕ್ಕೊಳಗಾದವರು. ಇವರು ತಮ್ಮ ಪತಿ ನೋಣಯ್ಯ ಗೌಡ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಮೃತ ಮಾವ ಈಶ್ವರ ಗೌಡ ಅವರಿಗೆ ಸೇರಿದ ಜಾಗವನ್ನು ಅತ್ತೆಯವರು ಬಾಯ್ದರೆಯಾಗಿ ಪತಿ ನೋಣಯ್ಯ ಹಾಗೂ ಮೈದುನ ಕುಸುಮಾಧರನಿಗೆ ಪಾಲು ಮಾಡಿಕೊಟ್ಟಿದ್ದರು.
ದೂರಿನ ಪ್ರಕಾರ, ಬೇಬಿ ಅವರು ತಮಗೆ ಸಿಕ್ಕ ಜಾಗದಲ್ಲಿ ಹೊಸ ಮನೆ ನಿರ್ಮಾಣಕ್ಕಾಗಿ ಅಡಿಪಾಯ ಹಾಕಿದ್ದರು ಹಾಗೂ ಬೋರ್ವೆಲ್ ಕೊರೆಸಿದ್ದರು. ಆ ಬೋರ್ವೆಲ್ನಲ್ಲಿ ಯಥೇಚ್ಛವಾಗಿ ನೀರು ಸಿಕ್ಕಿತ್ತು. ಆದರೆ ಮೈದುನ ಕುಸುಮಾಧರ ಕೊರೆಸಿದ ಬೋರ್ವೆಲ್ನಲ್ಲಿ ನೀರು ಸಿಕ್ಕಿರಲಿಲ್ಲ. ಅತ್ತಿಗೆಯ ಕುಟುಂಬ ನೆಮ್ಮದಿಯಿಂದ ಇರುವುದನ್ನು ಕಂಡು ಅಸೂಯೆಗೊಂಡಿದ್ದ ಕುಸುಮಾಧರ ಪದೇ ಪದೇ ಕಿರಿಕಿರಿ ಉಂಟುಮಾಡುತ್ತಿದ್ದ ಎನ್ನಲಾಗಿದೆ.
ಪೆಟ್ರೋಲ್ ಸುರಿದು ಹತ್ಯೆಗೆ ಯತ್ನ:
ಮೇ 6ರಂದು ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಕೈಯಲ್ಲಿ ಪೆಟ್ರೋಲ್ ಕ್ಯಾನ್ ಹಾಗೂ ಬೆಂಕಿಪೊಟ್ಟಣ ಹಿಡಿದು ಬಂದ ಕುಸುಮಾಧರ, “ನೀನು ನೆಮ್ಮದಿಯಿಂದ ಇರಬಾರದು, ನಿನ್ನನ್ನು ಕೊಂದು ಹಾಕುತ್ತೇನೆ” ಎಂದು ಆರ್ಭಟಿಸಿದ್ದಾನೆ. ಅಲ್ಲದೆ, ಏಕಾಏಕಿ ಕ್ಯಾನ್ನಲ್ಲಿದ್ದ ಪೆಟ್ರೋಲನ್ನು ಬೇಬಿ ಅವರ ಬೆನ್ನಿನ ಮೇಲೆ ಸುರಿದಿದ್ದಾನೆ. ಕೂಡಲೇ ಬೆಂಕಿ ಹಚ್ಚಲು ಯತ್ನಿಸಿದಾಗ, ಬೇಬಿ ಅವರು ಬೊಬ್ಬೆ ಹೊಡೆದಿದ್ದಾರೆ. ಸದ್ದು ಕೇಳಿ ಅತ್ತೆ ಹಾಗೂ ನೆರೆಹೊರೆಯವರು ಓಡಿ ಬಂದಿದ್ದಾರೆ. ಜನರನ್ನು ಕಂಡೊಡನೆ ಆರೋಪಿ ಪೆಟ್ರೋಲ್ ಕ್ಯಾನ್ ಮತ್ತು ಬೆಂಕಿಪೊಟ್ಟಣವನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದಾನೆ.
ಅದೃಷ್ಟವಶಾತ್ ಬೇಬಿ ಅವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 109(1) (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಿಸಿ ಅವಿನಾಶ್ ಸಿ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪದೆದಿದ್ದು ಕಾನೂನು ಪ್ರಕ್ರಿಯೆ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರು ಪದಿಸಲಿದ್ದಾರೆ ಎಂದು ತಿಳಿದು ಬಂದಿದೆ.







