ಬಂಟ್ವಾಳ: ಯುವವಾಹಿನಿ (ರಿ.) ಬಂಟ್ವಾಳ ಘಟಕದ ಜಂಟಿ ಸಭೆಯಲ್ಲಿ ನೂತನ ಸಮಿತಿಯ ವಿಶೇಷ ಯೋಜನೆಯಾಗಿ “ಮನೆ ಮನೆ ಹಸಿರು ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

ಯುವವಾಹಿನಿಯ “ಹಸಿರುಯಾನ” ಯೋಜನೆಯಡಿ ಈ ಅಭಿಯಾನವನ್ನು ಘಟಕದ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಪರಿಸರ ಸಂರಕ್ಷಣೆ, ಹಸಿರು ಪರಿಸರ ನಿರ್ಮಾಣ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಉದ್ದೇಶದಿಂದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದು ಗಿಡವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಸಮಾಜದಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಹಸಿರು ವಾತಾವರಣ ನಿರ್ಮಾಣಕ್ಕೆ ಯುವವಾಹಿನಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ.
ಈ ಮಹತ್ವದ ಅಭಿಯಾನಕ್ಕೆ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಮಹಾಂಕಾಳಿಬೆಟ್ಟು ಇವರ ನಿವಾಸದಲ್ಲಿ ಜುಲೈ 5 ರವಿವಾರ ಅಧ್ಯಕ್ಷ ಕಿರಣ್ ರಾಜ್ ಪೂಂಜರೆಕೋಡಿ ಇವರ ನೇತೃತ್ವದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಅಧಿಕೃತ ಚಾಲನೆ ನೀಡಲಾಯಿತು.
ಈ ಬಳಿಕ ಮಾತನಾಡಿ, “ಮನೆ ಮನೆ ಹಸಿರು ಅಭಿಯಾನ”ವು ಕೇವಲ ಗಿಡ ನೆಡುವ ಕಾರ್ಯಕ್ರಮವಾಗಿರದೆ, ಪರಿಸರದ ಬಗ್ಗೆ ಜನರಲ್ಲಿ ಅರಿವು ಮತ್ತು ಜವಾಬ್ದಾರಿಯನ್ನು ಮೂಡಿಸುವ ಸಾಮಾಜಿಕ ಚಳುವಳಿಯಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಘಟಕದ ವ್ಯಾಪ್ತಿಯ ಎಲ್ಲಾ ಸದಸ್ಯರ ಮನೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಈ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಸಂಕಲ್ಪವನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.)ಬಂಟ್ವಾಳ ಘಟಕದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.







