ಸುಳ್ಯ: ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಶನಿವಾರ ಸಂಜೆ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಮನೆಯ ಸಮೀಪದ ಕೆರೆಯ ಬಳಿ ಆಟವಾಡುತ್ತಿದ್ದ ಐದು ವರ್ಷದ ಅವಳಿ ಮಕ್ಕಳು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಮುರುಳ್ಯ ಗ್ರಾಮದ ಕಡೀರ ವಸಂತ ಹಾಗೂ ದಿವ್ಯ ದಂಪತಿಯ ಅವಳಿ ಮಕ್ಕಳಾದ ಯಶ್ವಿನ್ (5) ಮತ್ತು ಜಸ್ವಿತ್ (5) ಅವಳಿ ಮಕ್ಕಳು ಮೃತಪಟ್ಟರು ಎಂದು ತಿಳಿದುಬಂದಿದೆ.
ಅವಳಿ ಮಕ್ಕಳು ಮನೆಯ ಸಮೀಪದಲ್ಲಿರುವ 15 ಅಡಿ ಆಳದ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮುರುಳ್ಯ ಶಾಂತಿನಗರ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿಯಲ್ಲಿ ಕಲಿಯುತ್ತಿರುವ ಅವಳಿ ಮಕ್ಕಳಿಬ್ಬರು ಶಾಲೆ ಬಿಟ್ಟು ಮನೆಗೆ ಬಂದು ಆಟವಾಡುತ್ತ ಕೆರೆಯತ್ತ ಹೋಗಿದ್ದರು ಎನ್ನಲಾಗಿದೆ.

ವಸಂತ ಅವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ದಿವ್ಯ ಅವರು ಕೂಲಿ ಕೆಲಸಕ್ಕೆ ತೆರಳಿದ್ದರೆನ್ನಲಾಗಿದ್ದು, ಮನೆಯಲ್ಲಿ ಅಜ್ಜ ಮತ್ತು ಅಜ್ಜಿ ಮಾತ್ರ ಎಂದು ತಿಳಿದುಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಗ್ನಿಶಾಮಕ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ನೀರಿನಿಂದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಬೆಳ್ಳಾರೆ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.







