ಮಂಗಳೂರು: ಉನ್ನತ ಶಿಕ್ಷಣಕ್ಕಾಗಿ ಜರ್ಮನಿಗೆ ತೆರಳಿದ್ದ ಮಂಗಳೂರು ಮೂಲದ 21 ವರ್ಷದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಚಾರಣ ಮುಗಿಸಿ ವಿಹಾರದಲ್ಲಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಅತ್ಯಂತ ದುರಂತ ಘಟನೆಯೊಂದು ಜರ್ಮನಿಯ ಲೀಪ್ಜಿಗ್ ಪ್ರಾಂತ್ಯದಲ್ಲಿ ನಡೆದಿದೆ.

ಮಂಗಳೂರಿನ ಮರಕಡ-ಕುಂಜತ್ಬೈಲ್ ನಿವಾಸಿಯಾದ ಮೊಹಮ್ಮದ್ ಅನಿಜ್ ಅಬೂಬಕ್ಕರ್ ಮೃತಪಟ್ಟ ದುರ್ದೈವಿ. ಕೇವಲ 21 ವರ್ಷದ ಈ ಯುವಕ ಜರ್ಮನಿಯ ಹಾಲೆಯ ರಣ್ ಶಿಕ್ಷಣ ಸಂಸ್ಥೆಯಲ್ಲಿ ಬಿಬಿಎ (BBA) ಮೂರನೇ ಸೆಮಿಸ್ಟರ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆದರೆ ವಿಧಿಯ ಆಟ ಬೇರೆಯದೇ ಆಗಿತ್ತು.
ಪೊಲೀಸ್ ಹಾಗೂ ರಾಯಭಾರ ಕಚೇರಿಯ ಮೂಲಗಳ ಪ್ರಕಾರ, ಜುಲೈ 2ರ ಗುರುವಾರ ಬೆಳಗ್ಗೆ ಅನಿಜ್ ತನ್ನ ಸಹಪಾಠಿಗಳೊಂದಿಗೆ ಸೇರಿ ಲೀಪ್ಜಿಗ್ ಪ್ರಾಂತ್ಯದ ಬಳಿ ಟ್ರಕ್ಕಿಂಗ್ ಮಾಡಲು ಹೊರಟಿದ್ದ. ಚಾರಣ ಮುಗಿದ ಬಳಿಕ ಈತ ಹಾಗೂ ಸ್ನೇಹಿತರು ಜೊತೆಗೂಡಿ ಲೀಪ್ಜಿಗ್ನ ‘ರೆಡ್ ಬುಲ್ ಅರೆನಾ’ ಕ್ರೀಡಾಂಗಣದ ಬಳಿ ನೀರಿನಲ್ಲಿ ಆಡಲು ತೆರಳಿದ್ದರು. ಅಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾಗ ಹಠಾತ್ ಆಗಿ ಅನಿಜ್ ನಾಪತ್ತೆಯಾಗಿದ್ದಾನೆ.
ಶೋಧ ಕಾರ್ಯ ಮತ್ತು ಸಾವು:
ಆತ ಕಾಣೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಆತಂಕಗೊಂಡ ಸ್ನೇಹಿತರು ತಕ್ಷಣವೇ ಲ್ಯಾಂಡೌರ್ ಸೇತುವೆ ಪ್ರದೇಶದ ತುರ್ತು ಸೇವೆಗಳ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಜರ್ಮನಿಯ ವಿಪತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಭರ್ಜರಿ ಶೋಧ ಕಾರ್ಯ ನಡೆಸಿ, ನೀರಿನಲ್ಲಿ ಮುಳುಗಿದ್ದ ಅನಿಜ್ನ ಶವವನ್ನು ಹೊರತೆಗೆದಿವೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಜರ್ಮನಿಯ ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮೃತನ ಜೊತೆಯಲ್ಲಿದ್ದ ಇಬ್ಬರು ಭಾರತೀಯರು ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮಗನ ಸಾವಿನ ಸುದ್ದಿಯಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ತಂದೆ ಮರಕಡ ಅಬೂಬಕ್ಕರ್ ಸಿದ್ದಿಕ್ ಹಾಗೂ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ.





