ಉಜಿರೆ: ದೇಶದ ಜನಸಂಖ್ಯೆ, ಶಿಕ್ಷಣದ ಮಟ್ಟ, ಕೃಷಿ ಉತ್ಪಾದನೆ, ಉದ್ಯೋಗ, ಆರೋಗ್ಯ ಸೇವೆಗಳು, ಆರ್ಥಿಕ ಬೆಳವಣಿಗೆ ಹಾಗೂ ಸಾಮಾಜಿಕ ಅಭಿವೃದ್ಧಿಯ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸುವ ಮೂಲಕ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲು ಸಂಖ್ಯಾಶಾಸ್ತ್ರ ಸಹಕಾರಿಯಾಗಿದೆ.

ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ರೂಪಿಸುವುದು, ಅವುಗಳ ಅನುಷ್ಠಾನವನ್ನು ಮೌಲ್ಯಮಾಪನ ಮಾಡುವುದು ಹಾಗೂ ಜನರ ಅಗತ್ಯಗಳಿಗೆ ಅನುಗುಣವಾಗಿ ಹೊಸ ನೀತಿಗಳನ್ನು ರೂಪಿಸುವಲ್ಲಿ ಸಂಖ್ಯಾಶಾಸ್ತ್ರವು ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವಾಸಾರ್ಹ ದತ್ತಾಂಶವಿಲ್ಲದೆ ಯಾವುದೇ ಯೋಜನೆಯ ಯಶಸ್ಸನ್ನು ಅಳೆಯಲು ಸಾಧ್ಯವಿಲ್ಲ ಎಂದು ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಡಾ. ಪ್ರದೀಪ್ ಕೆ ಅಭಿಪ್ರಾಯಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ರತ್ನಾತ್ರಯ ಸಭಾಂಗಣದಲ್ಲಿ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನದ ಅಂಗವಾಗಿ ಆಯೋಜಿಸಿದ್ದ ಸಂಖ್ಯಾಶಾಸ್ತ್ರ ದಿನ ಆಚರಣೆಯಲ್ಲಿ ಪ್ರಧಾನ ಉಪನ್ಯಾಸ ನೀಡಿದರು.
ಇಂದಿನ ಡಿಜಿಟಲ್ ಯುಗದಲ್ಲಿ ದತ್ತಾಂಶವೇ ಹೊಸ ಇಂಧನ. ಕೃತಕ ಬುದ್ಧಿಮತ್ತೆ (Artificial Intelligence), ಯಂತ್ರ ಅಧ್ಯಯನ (Machine Learning), ದತ್ತಾಂಶ ವಿಜ್ಞಾನ (Data Science), ವ್ಯವಹಾರ ವಿಶ್ಲೇಷಣೆ (Business Analytics) ಹಾಗೂ ಸ್ಮಾರ್ಟ್ ಆಡಳಿತದಂತಹ ಆಧುನಿಕ ತಂತ್ರಜ್ಞಾನಗಳ ಮೂಲಾಧಾರವೇ ಸಂಖ್ಯಾಶಾಸ್ತ್ರವಾಗಿದೆ. ಈ ಕ್ಷೇತ್ರದಲ್ಲಿ ವಿಫುಲವಾದ ಅವಕಾಶಗಳು ತೆರೆದುಕೊಂಡಿವೆ. ವಿದ್ಯಾರ್ಥಿಗಳು ಸಂಖ್ಯಾಶಾಸ್ತ್ರದ ಮಹತ್ವವನ್ನು ಅರಿತು ದತ್ತಾಂಶ ಆಧಾರಿತ ಚಿಂತನೆ ಮತ್ತು ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ ಮಾತನಾಡಿ, ಪ್ರತಿಯೊಂದು ದಿನದ ಆಚರಣೆಯ ಹಿಂದೆ ತನ್ನದೇ ಆತ ಮಹತ್ವ ಮತ್ತು ಇತಿಹಾಸವನ್ನು ಹೊಂದಿದೆ. ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಮಹಾಲನೋಬಿಸ್ ಈ ದಿನದ ಆಚರಣೆಗೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ.
ನಿಖರ ಮಾಹಿತಿಯೇ ಉತ್ತಮ ಆಡಳಿತದ ಅಡಿಪಾಯ. ಪ್ರತಿಯೊಬ್ಬರೂ ದತ್ತಾಂಶದ ಮಹತ್ವವನ್ನು ಅರಿತು ಜವಾಬ್ದಾರಿಯುತವಾಗಿ ಬಳಸುವ ಸಂಕಲ್ಪವನ್ನು ಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ ಆಚರಣೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪೆನ್ಸಿಲ್ ಸ್ಕೆಚ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಪ್ರದೀಪ್ ಕೆ ಹಾಗು ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಬಿ ಪ್ರಶಸ್ತಿ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಾಲತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಮಾನ್ವಿತಾ ಸಂಖ್ಯಾಶಾಸ್ತ್ರದಿನದ ಮಹತ್ವವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಉಪನ್ಯಾಸಕ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಫಿರೋಜ್ ಖಾನ್ ಸ್ವಾಗತಿಸಿದರು. ಕುಮಾರಿ ಅನುಲೇಖ ನಿರೂಪಿಸಿ, ವಿದ್ಯಾರ್ಥಿ ದಿಶಾನ್ ವಂದಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಅಮೃತಾ ಎನ್ ಹಾಗು ಅಂಕಿತಾ ಎಮ್ ಕೆ ಸಂಯೋಜಿಸಿದರು.







