ಕಾಸರಗೋಡು: ಪ್ರೀತಿ ಎಂಬ ಮಾಯೆಗೆ ಬಿದ್ದು, ನೂರು ಆಸೆಗಳನ್ನು ಹೊತ್ತು ಗಂಡನ ಮನೆ ಮೆಟ್ಟಿದ್ದ ನವವಿವಾಹಿತೆಯೊಬ್ಬಳು ಕೇವಲ ಒಂದೇ ವರ್ಷದಲ್ಲಿ ಹೆಣವಾಗಿರುವ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಗಂಡ ಮತ್ತು ಅತ್ತೆಯ ಕಿರುಕುಳ ತಾಳಲಾರದೆ, ಅವರಿಬ್ಬರ ಕಣ್ಣೆದುರೇ ಆಸಿಡ್ ಸೇವಿಸಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಾಸರಗೋಡಿನ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣಲಂನಲ್ಲಿ ಈ ಘೋರ ದುರಂತ ಸಂಭವಿಸಿದೆ. ಮೂಲತಃ ಬದಿಯಡ್ಕದ ಚೆರ್ಲಡುಕ್ಕಂ ನಿವಾಸಿಯಾದ 24 ವರ್ಷದ ಫಾತಿಮತ್ ಸುಫೈದಾ ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ಆಕೆಯ ಪತಿ ಆದಿಲ್ನನ್ನು ಈಗಾಗಲೇ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಶನಿವಾರ ರಾತ್ರಿ ಪತಿ ಮತ್ತು ಅತ್ತೆಯ ಕಿರುಕುಳ ಮಿತಿ ಮೀರಿದಾಗ, ತೀವ್ರ ಮನನೊಂದ ಸುಫೈದಾ ಅವರಿಬ್ಬರ ಮುಂದೆಯೇ ಆಸಿಡ್ ಸೇವಿಸಿದ್ದಾರೆ. ತಕ್ಷಣವೇ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಆಕೆ ಕೊನೆಯುಸಿರೆಳೆದಿದ್ದಾಳೆ.
ಮೃತಳ ಸಹೋದರ ಎಂ.ಕೆ. ಅಬ್ದುಲ್ ವಾಸಿಲ್ ಎ.ಕೆ. ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಫಾತಿಮತ್ ಸುಫೈದಾ ಮತ್ತು ಆದಿಲ್ ಪರಸ್ಪರ ಪ್ರೀತಿಸಿ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸುಫೈದಾ ಧರಿಸಿದ್ದ ಚಿನ್ನದ ಆಭರಣಗಳಿಗಾಗಿ ಪತಿ ಮತ್ತು ಅತ್ತೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು. ನಿರಂತರ ನಿಂದನೆ ಹಾಗೂ ದೌರ್ಜನ್ಯದಿಂದ ಬೇಸತ್ತೇ ಆಕೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರೀತಿಸಿ ಮದುವೆಯಾದ ಗಂಡನೇ ಚಿನ್ನದ ಆಸೆಗಾಗಿ ಹೆಂಡತಿಯ ಜೀವ ಹಿಂಡಿರುವುದು ನಿಜಕ್ಕೂ ದುರಂತ.







