Darshan Thoogudeepa: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರು ಸುಪ್ರೀಂಕೋರ್ಟ್ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಕುಟುಂಬವನ್ನು ಭೇಟಿ ಮಾಡಲು ಜೈಲಧಿಕಾರಿಗಳಿಂದ ಅವಕಾಶ ನಿರಾಕರಣೆ, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ, ಬೆದರಿಕೆ, ಇನ್ನೂ ಕ್ವಾರಂಟೈನ್ ಸೆಲ್ನಲಿ ಇಟ್ಟಿರುವುದು ಹೀಗೆ ಹಲವು ಕಾರಣಗಳನ್ನು ನೀಡಿ ದರ್ಶನ್ ಅವರು ಜಾಮೀನಿಗಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ದರ್ಶನ್ ಪರ ವಕೀಲರು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಆಲಿಸಿದ ಸುಪ್ರೀಂ ಕೋರ್ಟ್ ದರ್ಶನ್ರ ಜಾಮೀನು ಅರ್ಜಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಒಂದು ವರ್ಷದ ಕಾಲಾವಕಾಶವನ್ನು ನೀಡಿದೆ.
ಜಾಮೀನು ಅರ್ಜಿಯ ವಿಚಾರಣೆ ಆಲಿಸಿದ ಸುಪ್ರೀಂಕೋರ್ಟ್, ಪ್ರಕರಣದ ವಿಚಾರಣೆಗೆ ಒಂದು ವರ್ಷದ ಕಾಲಾವಧಿ ನೀಡಿದ್ದು, ಅಷ್ಟರಲ್ಲಿ ಸಾಕ್ಷ್ಯಗಳ ವಿಚಾರಣೆ ಮುಗಿಯದಿದ್ದಲ್ಲಿ, ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ಹೇಳಿದೆ. ಅಲ್ಲಿಗೆ, ದರ್ಶನ್ಗೆ ಕನಿಷ್ಟ ಒಂದು ವರ್ಷ ಜೈಲು ವಾಸ ಖಾಯಂ ಆದಂತಾಗಿದೆ. ಒಂದು ವರ್ಷದ ಬಳಿಕವಷ್ಟೆ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸುಪ್ರೀಂ ಕೋರ್ಟ್ನಲ್ಲಿ ಇಂದು ನಟ ದರ್ಶನ್ ಪರ ವಾದ ಮಂಡಿಸಿದ ಖ್ಯಾತ ವಕೀಲ ಮುಕುಲ್ ರೊಹ್ಟಗಿ, ‘272ಕ್ಕೂ ಹೆಚ್ಚು ಸಾಕ್ಷಿಗಳು ಪ್ರಕರಣದಲ್ಲಿದ್ದು, ಈ ವರೆಗೆ 10 ಸಾಕ್ಷ್ಯಗಳನ್ನು ಮಾತ್ರವೇ ವಿಚಾರಣೆ ಮಾಡಲಾಗಿದೆ. ಮುಖ್ಯ ಸಾಕ್ಷಿಗಳ ವಿಚಾರಣೆಯನ್ನಾದರೂ ಮುಗಿಸುವಂತೆ ನಾವು ಕೇಳಿದ್ದೆವು ಆದರೆ ಅದು ಸಹ ಸಾಧ್ಯವಾಗಿಲ್ಲ’ ಎಂದರು. ಆದರೆ ರೊಹ್ಟಗಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ಧಾರ್ಥ್ ಲೂತ್ರಾ, ‘ನೀವು (ಆರೋಪಿಗಳು) ಸಾಕ್ಷ್ಯಗಳಿಗೆ ಏನೇನು ಮಾಡಿದ್ದೀರೆಂದು ಹೇಳಿದರೆ ನಿಮ್ಮ ಜಾಮೀನು ಅರ್ಜಿಯೇ ರದ್ದಾಗಲಿದೆ’ ಎಂದರು. ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ವಕೀಲರು, ‘ಮುಂದಿನ ಒಂದು ವರ್ಷದಲ್ಲಿ ಸಾಕ್ಷ್ಯಗಳ ವಿಚಾರಣೆ ಮುಗಿಸುವುದಾಗಿ ಮಾಹಿತಿ ನೀಡಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿಗಳು, ‘ಒಂದು ವರ್ಷದ ಒಳಗೆ 60 ಸಾಕ್ಷ್ಯಗಳ ವಿಚಾರಣೆ ಮುಗಿಸಿ, ಆ ಬಳಿಕ ವಿಚಾರಣಾ ನ್ಯಾಯಾಲಯದಲ್ಲಿಯೇ ಆರೋಪಿ (ದರ್ಶನ್) ಜಾಮೀನಿಗೆ ಅರ್ಜಿ ಸಲ್ಲಿಸಬಹುದು’ ಎಂದರು. ಜೊತೆಗೆ ‘ಆರೋಪಿಗೆ ಇತರೆ ಕೈದಿಗಳಿಗೆ ನೀಡಿರುವ ಸವಲತ್ತುಗಳನ್ನೇ ನೀಡಬೇಕು ಎಂದು ಸೂಚಿಸಿದರು ಕ್ವಾರಂಟೈನ್ ಸೆಲ್ ಬಗ್ಗೆ ಯಾವುದೇ ಸೂಚನೆ ಅಥವಾ ಆದೇಶವನ್ನು ನೀಡುವುದಿಲ್ಲವೆಂದು ನ್ಯಾಯಮೂರ್ತಿಗಳು ಹೇಳಿದರು.







