ಬಂಟ್ವಾಳ: ಮದುವೆ ಸಂಭ್ರಮದ ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ಯುವಕನೋರ್ವ ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘೋರ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನಾಯಿಲ ಎಂಬಲ್ಲಿ ನಡೆದಿದೆ.

ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಅಶ್ವಥ್ (32) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ನಾಯಿಲದ ಸಂಬಂಧಿಕರ ಮನೆಯಲ್ಲಿ ಮದರಂಗಿ ಕಾರ್ಯಕ್ರಮದ ನಿರೂಪಣೆಗಾಗಿ ವೇದಿಕೆ ಹತ್ತಿ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದಂತೆ ಹಠಾತ್ ಕುಸಿದು ಬಿದ್ದಿದ್ದಾನೆ.

ಕೂಡಲೇ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






