ಪುತ್ತೂರು: ಬೆಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ತೂರು ಮೂಲದ ಸಾಫ್ಟ್ವೇರ್ ಉದ್ಯೋಗಿ, ಯುವಕ ಸೂರಜ್ ರೈ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 27 ವರ್ಷ ವಯಸ್ಸಾಗಿತ್ತು.
ಅಪಘಾತ ನಡೆದಿದ್ದು ಹೇಗೆ?
ಮೇ 15ರಂದು ರಾತ್ರಿ ಸೂರಜ್ ರೈ ಅವರು ತಮ್ಮ ಬೈಕ್ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕುಣಿಗಲ್ ಬಳಿ ಇವರ ಬೈಕ್ ಕೋಳಿ ಸಾಗಾಟದ ವಾಹನಕ್ಕೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಸೂರಜ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಕುಣಿಗಲ್ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು (ಮೇ 22) ಮುಂಜಾನೆ ಅವರು ವಿಧಿವಶರಾಗಿದ್ದಾರೆ.
ಮೃತ ಸೂರಜ್ ರೈ ಅವರು ಪುತ್ತೂರಿನ ಬೆಳ್ಳಾರೆ ನಿವಾಸಿ, ಪ್ರಸಿದ್ಧ ಯಕ್ಷಗುರು ವಾಸುದೇವ ರೈ ಮತ್ತು ಶರ್ಮಿಳಾ ವಿ. ರೈ ದಂಪತಿಯ ಪುತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸೂರಜ್, ಸವಣೂರು ಅಂಬಾ ಬ್ರದರ್ಸ್ ತಂಡದ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಶ್ರೀಮತಿ ಸ್ನೇಹ, ತಂದೆ ವಾಸುದೇವ ರೈ, ತಾಯಿ ಶರ್ಮಿಳಾ ರೈ, ಸಹೋದರ ಸುದೀಪ್ ರೈ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






