ಬಂಟ್ವಾಳ: ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಮನೆಯಲ್ಲೇ ರಕ್ತಸಿಕ್ತ ಅಧ್ಯಾಯವೊಂದು ಬರೆಯಲ್ಪಟ್ಟಿದೆ! ಕೇವಲ ಕೆಲಸದ ವಿಚಾರಕ್ಕೆ ಶುರುವಾದ ಸಣ್ಣ ತಕರಾರು, ಕೊನೆಯಲ್ಲಿ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.”




ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಪಿಲಾತಬೆಟ್ಟು ನಿವಾಸಿ ಶೇಖರ ಎಂಬುವವರ ಮನೆಯಲ್ಲಿ ಮೇ 31ರ ರಾತ್ರಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಕುಟುಂಬದ ಎಲ್ಲಾ ಸದಸ್ಯರು ಸಡಗರದಿಂದಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಇದೇ ವೇಳೆ ಶೇಖರ ಅವರ ಸಹೋದರ ಮಧುಸೂದನ ಹಾಗೂ ಮತ್ತೊಬ್ಬ ಸಹೋದರನ ಮಗನಾದ ರಾಹುಲ್ ನಡುವೆ ಕೆಲಸದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದೆ.”
ಮಾತಿನ ಚಕಮಕಿಯಿಂದ ತೀವ್ರ ಕೋಪಗೊಂಡ ಆರೋಪಿ ರಾಹುಲ್, ಅಲ್ಲಿಂದ ಹೊರಟು ಹೋಗಿದ್ದ. ಆದರೆ, ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮನೆಯ ಹೊರಗಡೆ ಜೋರಾಗಿ ಗಲಾಟೆಯ ಶಬ್ದ ಕೇಳಿಬಂದಿದೆ. ತಕ್ಷಣ ಕುಟುಂಬಸ್ಥರು ಓಡಿ ಬಂದು ನೋಡಿದಾಗ ಕರುಳು ಹಿಂಡುವ ದೃಶ್ಯ ಕಂಡುಬಂದಿದೆ. ಕೋಪದ ಕೈಗೆ ಬುದ್ಧಿ ಕೊಟ್ಟಿದ್ದ ರಾಹುಲ್, ಬಿಯರ್ ಬಾಟಲಿಯಿಂದ ಚಿಕ್ಕಪ್ಪ ಮಧುಸೂದನ ಅವರ ಕುತ್ತಿಗೆಗೆ ಮನಬಂದಂತೆ ತಿವಿದು ರಕ್ತದ ಮಡುವಿನಲ್ಲಿ ಕೆಡವಿದ್ದ!”. ಗಂಭೀರವಾಗಿ ಗಾಯಗೊಂಡಿದ್ದ ಮಧುಸೂದನ (37) ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 103ರಡಿ ಅ.ಕ್ರ. 58/2026 ಪ್ರಕರಣ ದಾಖಲಿಸಲಾಗಿದೆ. ಆರೋಪಿ ರಾಹುಲ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.







