ನವದೆಹಲಿ: ಮೇ ಮೊದಲ ವಾರದಲ್ಲಿ ನಡೆದಿದ್ದ ನೀಟ್ (NEET 2026) ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ರದ್ದುಗೊಳಿಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಆದೇಶ ಹೊರಡಿಸಿದೆ. ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಶುಕ್ರವಾರ ರಾಜಸ್ಥಾನದ ಸಿಕಾರ್ನಲ್ಲಿ 22 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಸಿಬಿಐ ತನಿಖೆ ಮುಂದುವರಿದಿದೆ. ಈಗಾಗಲೇ ಈ ಪ್ರಕರಣದ ಮುಖ್ಯ ಆರೋಪಿಯಾದ ಪ್ರೊಫೆಸರ್ ಪಿವಿ ಕುಲಕರ್ಣಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಆತನ ಸಾವಿಗೆ ಪರೀಕ್ಷೆ ರದ್ದತಿಯಿಂದ ಉಂಟಾದ ಖಿನ್ನತೆಯೇ ಕಾರಣ ಎಂದು ಹೇಳಿದ್ದು, ಅದರಲ್ಲಿ ಆತ ಉತ್ತಮ ಅಂಕಗಳನ್ನು ಗಳಿಸುವ ನಿರೀಕ್ಷೆ ಇಟ್ಟುಕೊಂಡಿದ್ದ ಎಂದು ಹೇಳಿದ್ದಾರೆ. ರಾಜಸ್ಥಾನದ ಜುನ್ಜುನು ಜಿಲ್ಲೆಯ ನಿವಾಸಿ ಪ್ರದೀಪ್ ಮೇಘವಾಲ್ ಎಂಬ 22 ವರ್ಷದ ಯುವಕನೇ ಮೃತ ವಿದ್ಯಾರ್ಥಿ. ಪ್ರದೀಪ್ ತನ್ನ ಸಹೋದರಿಯರೊಂದಿಗೆ ಸಿಕಾರ್ನ ಬಾಡಿಗೆ ರೂಂನಲ್ಲಿ ವಾಸಿಸುತ್ತಿದ್ದರು. ಕಳೆದ 3 ವರ್ಷಗಳಿಂದ ನೀಟ್ಗೆ ತಯಾರಿ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನೀಟ್ ಪರೀಕ್ಷೆ ರದ್ದಾದಾಗಲಿಂದ ಬಹಳ ಬೇಸರಗೊಂಡಿದ್ದ ಪ್ರದೀಪ್ ರೂಂನಲ್ಲಿಯೇ ತನ್ನ ಸಹೋದರಿಯ ದುಪಟ್ಟಾದಿಂದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ. 3 ವರ್ಷಗಳಿಂದ ನೀಟ್ಗೆ ತಯಾರಿ ನಡೆಸುತ್ತಿದ್ದ ಪ್ರದೀಪ್ ಈ ಬಾರಿ ಸುಮಾರು 650 ಅಂಕಗಳನ್ನು ನಿರೀಕ್ಷಿಸಿದ್ದರು. ಆದರೆ ಪರೀಕ್ಷೆ ರದ್ದಾದ ನಂತರ ದುಃಖಿತನಾಗಿದ್ದರು ಎನ್ನಲಾಗಿದೆ.
ಶುಕ್ರವಾರ ಮಧ್ಯಾಹ್ನ, ಪ್ರದೀಪ್ ಅವರ ಅಕ್ಕ ಬಾತ್ರೂಂನಲ್ಲಿದ್ದಾಗ ಅವರು ನೇಣು ಹಾಕಿಕೊಂಡಿದ್ದಾರೆ. ಬಾತ್ರೂಂನಿಂದ ಬಂದ ಆಕೆ ಪ್ರದೀಪ್ ಸೀಲಿಂಗ್ ಫ್ಯಾನ್ನಲ್ಲಿ ನೇತಾಡುತ್ತಿರುವುದನ್ನು ಕಂಡು ಆಘಾತಗೊಂಡು ತಕ್ಷಣ ಕತ್ತರಿಯಿಂದ ದುಪಟ್ಟಾ ಕತ್ತರಿಸಿದ್ದಾರೆ. ತಕ್ಷಣ ಮನೆ ಮಾಲೀಕರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪ್ರದೀಪ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಅಲ್ಲಿ ಅವರು ಮೃತಪಟ್ಟಿದ್ದಾರೆ.







