ಬೆಳ್ತಂಗಡಿ: ಖಿಳರ್ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಬೆಳ್ತಂಗಡಿ ಇದರ ವತಿಯಿಂದ ನೂತನ ಸ್ಮಾರ್ಟ್ ಕ್ಲಾಸ್ ಹಾಗೂ ಮದರಸ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮವು ಖಿಳರ್ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆಯಲ್ಲಿ ನಡೆಯಿತು.
ದಾರುಸ್ಸಲಾಂ ಇದರ ಚೇರ್ಮನ್ ಝೈನುಲ್ ಆಬಿದ್ ಜೆಫ್ರಿ ತಂಙಳ್ ನೂತನ ಮದರಸ ಕೊಠಡಿಯನ್ನು ಉದ್ಘಾಟಿಸಿದರು. ಬಳಿಕ ಖತೀಬ್ ಹನೀಫ್ ಫೈಝಿ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಖಾದರ್ ನಾವೂರು ಅವರು, ಇಂದಿನ ಮಕ್ಕಳು ದಾರಿ ತಪ್ಪಲು ಪೋಷಕರು ಮತ್ತು ಮಕ್ಕಳ ನಡುವಿನ ದಿನನಿತ್ಯದ ಸಂಬಂಧ ಹಾಗೂ ಸಂವಹನದ ಕೊರತೆಯೂ ಪ್ರಮುಖ ಕಾರಣವಾಗಿದೆ. ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರಕ್ಕೆ ಪೋಷಕರು ಹೆಚ್ಚಿನ ಗಮನ ನೀಡಬೇಕೆಂದು ಅವರು ಕರೆ ನೀಡಿದರು.
ಹಯಾತುಲ್ ಇಸ್ಲಾಂ ಮದರಸದ ಅಧ್ಯಕ್ಷ ಬಿ. ಶೇಕುಂಞ್ಞ, ನಝೀರ್ ಬಿ.ಎ., ಬಿ.ಎಚ್ ರಝಾಕ್, ಫೈಝಲ್ ಐ.ಜೆ., ಹನೀಫ್ ವರ್ಷಾ, ಮುಹಮ್ಮದ್ ಕುದ್ರಡ್ಕ ಹಾಗೂ ಹೈದರ್ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಸ್ವಾಗತಿಸಿದರು. ಉಪಾಧ್ಯಾಯ ಅಬ್ದುಲ್ ರಹಿಮಾನ್ ಮದನಿ ವಂದಿಸಿದರು. ಶರೀಫ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.







