ಮೂಡುಪಡುಕೋಡಿ: ಕ್ರೀಡೆಯು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ಮನುಷ್ಯರಲ್ಲಿ ಒಗ್ಗಟ್ಟು, ನಾಯಕತ್ವ ಗುಣ ಮತ್ತು ಏಕಾಗ್ರತೆಯನ್ನು ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಜಗನ್ನಾಥ ಚೌಟ ಅವರು ಅಭಿಪ್ರಾಯಪಟ್ಟರು.
ಯುವ ಬಂಟರ ಸಂಘ ಮತ್ತು ಕಾವಳಕಟ್ಟೆ ವಲಯದ ಆಶ್ರಯದಲ್ಲಿ, ಇರ್ವತ್ತೂರು, ಮೂಡುಪಡುಕೋಡಿ, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡೂರು ಹಾಗೂ ಕಾಡಬೆಟ್ಟು ಗ್ರಾಮದ ತಂಡಗಳಿಗಾಗಿ ಆಯೋಜಿಸಲಾಗಿದ್ದ “ಬಂಟರ ಕ್ರೀಡಾಕೂಟ-2026” ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದು ಮೈದಾನದಲ್ಲಿ ಕಂಡುಬರುತ್ತಿರುವ ಶಿಸ್ತು ಮತ್ತು ಒಗ್ಗಟ್ಟು ನಮ್ಮ ಬಂಟರ ಸಂಘಟನೆ ನಮಗೆ ಕಲಿಸಿದ ಪಾಠ. ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ನಾವೆಲ್ಲ ಇಂದು ಒಂದೇ ವೇದಿಕೆಯಲ್ಲಿ ನಿಂತಿದ್ದೇವೆ. ಯುವ ಪೀಳಿಗೆಯು ಹಿರಿಯರ ಮಾರ್ಗದರ್ಶನದಲ್ಲಿ ಸಾಗಿದಾಗ ಸಂಘಟನೆ ಮತ್ತಷ್ಟು ಬಲಿಷ್ಠವಾಗುತ್ತದೆ. ಕ್ರೀಡೆಯಲ್ಲಿ ಆರೋಗ್ಯಕರ ಪೈಪೋಟಿ ಇರಬೇಕೇ ಹೊರತು ದ್ವೇಷವಿರಬಾರದು. ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ,” ಎಂದು ಹಾರೈಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀ ಪ್ರಮೋದ್ ಕುಮಾರ್ ರೈ ಅವರು ಮಾತನಾಡಿ, “ದೀಪವು ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕು ನೀಡುವಂತೆ, ಈ ಕ್ರೀಡಾಕೂಟವು ಜನಾಂಗದ ಬಾಂಧವರ ನಡುವೆ ಸ್ನೇಹದ ಬೆಳಕನ್ನು ಹರಿಸಲಿ,” ಎಂದರು.
ಒಟ್ಟು 6 ತಂಡಗಳು ಪಾಲ್ಗೊಂಡಿದ್ದ ಈ ಕ್ರೀಡಾಕೂಟದಲ್ಲಿ ಅತ್ಯಂತ ರೋಚಕ ಹೋರಾಟ ಕಂಡುಬಂದಿತು. ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಕಾಡಬೆಟ್ಟು ಗ್ರಾಮ ಹಾಗೂ ದ್ವಿತೀಯ ಸ್ಥಾನ ಮೂಡುಪಡುಕೋಡಿ ಗ್ರಾಮ ವಿಜೇತ ತಂಡಗಳು ಹಂಚಿಕೊಂಡವು. ಹಾಗೆಯೇ ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಇರ್ವತ್ತೂರು ಗ್ರಾಮ ಪ್ರಥಮ, ಮೂಡುಪಡುಕೋಡಿ ದ್ವಿತೀಯ ಹಾಗೂ ಕಾಡಬೆಟ್ಟು ತೃತೀಯ ಸ್ಥಾನ ಪಡೆದ ತಂಡಗಳಿಗೆ ಜಗನ್ನಾಥ ಚೌಟ ಅವರು ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವಳಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಶ್ರೀ ಮೋಹನ್ ಶೆಟ್ಟಿ ನರ್ವಲ್ದಡ್ಡ ವಹಿಸಿದ್ದರು. ವೇದಿಕೆಯಲ್ಲಿ ಬಂಟರ ಸಂಘ ಕಾವಳಕಟ್ಟೆ ಇದರ ಗೌರವಾಧ್ಯಕ್ಷ ಶ್ರೀ ಜಗನ್ನಾಥ ಶೆಟ್ಟಿ ಕೆದ್ದಳಿಕೆ, ಉಪಾಧ್ಯಕ್ಷ ಶ್ರೀ ಪ್ರದೀಪ್ ಕುಮಾರ್ ಬೀಯಂತಬೆಟ್ಟು, ಚಂದ್ರಶೇಖರ ಶೆಟ್ಟಿ ಪುಳಿಮಜಲು, ಕಾರ್ಯದರ್ಶಿ ಶ್ರೀ ಉದಯ್ ಕುಮಾರ್ ಶೆಟ್ಟಿ ಹಾಗೂ ಯುವ ವಿಭಾಗದ ಅಧ್ಯಕ್ಷ ಶ್ರೀ ಕಿಶೋರ್ ರೈ ಕಾಡಬೆಟ್ಟು ಉಪಾಧ್ಯಕ್ಷ ವಿವೇಕ್ ಶೆಟ್ಟಿ ಅಂಕದಲ, ಕ್ರೀಡಾ ಕಾರ್ಯದರ್ಶಿ ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.
ನಿಧಿಶಾ ಶೆಟ್ಟಿ ಸ್ವಾಗತಿಸಿ,ಉದಯ ಕುಮಾರ್ ಶೆಟ್ಟಿ ಧನ್ಯವಾದ ನೀಡಿದರು, ಪುನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಶೆಟ್ಟಿ , ಶ್ರೇಯಸ್ ಅಂಕದಲ,ಸಹನಾ ಎಂ ಶೆಟ್ಟಿ ನರ್ವಲ್ದಡ್ಡ, ಅದ್ವಿತಾ ಶೆಟ್ಟಿ ಮರಮ್ಮ ,ಸಮೀಕ್ಷಾ ಶೆಟ್ಟಿ, ಅಕ್ಷತಾ ರೈ , ಸಹನಾ ಶೆಟ್ಟಿ ಪಣೆಕಲ ಸಹಕರಿಸಿದರು.







