ಹಾಸನ: ಕರ್ನಾಟಕ ರಾಜಧಾನಿ ಬೆಂಗಳೂರು ಮತ್ತು ಪ್ರಮುಖ ಬಂದರು ನಗರಿ ಮಂಗಳೂರನ್ನು ಸಂಪರ್ಕಿಸುವ ಅತ್ಯಂತ ಮಹತ್ವದ ರಾಷ್ಟ್ರೀಯ ಹೆದ್ದಾರಿ 75ರ (NH 75) ಶಿರಾಡಿ ಘಾಟ್ ಮಾರ್ಗದ ದಶಕಗಳ ದುರವಸ್ಥೆಗೆ ಕಡೆಗೂ ಮುಕ್ತಿ ಸಿಗುವ ಕಾಲ ಹತ್ತಿರವಾಗಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಸಂಚಾರ ಬಂದ್ ಆಗಿ ಪ್ರಯಾಣಿಕರು ಮತ್ತು ಸರಕು ಸಾಗಣೆದಾರರು ಅನುಭವಿಸುತ್ತಿದ್ದ ನರಕಯಾತನೆಗೆ ಬ್ರೇಕ್ ಬೀಳುವ ಲಕ್ಷಣಗಳು ಕಾಣುತ್ತಿವೆ. ಮಳೆಗಾಲ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವಂತೆ, ಬಹುಕಾಲದಿಂದ ನನೆಗುದಿಗೆ ಬಿದ್ದಿದ್ದ ಹೆದ್ದಾರಿ ಚತುಷ್ಪತ ಕಾಮಗಾರಿ ಬಹುತೇಕ ಮುಗಿದಿದ್ದು, ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪ್ರಯಾಣದ ಸಮಯ ಶೇ 50ರಷ್ಟು ಇಳಿಕೆ:
ಹಿಂದೆಲ್ಲಾ ಹಾಸನದಿಂದ ಮಾರನಹಳ್ಳಿ ತಲುಪಲು ಐದಾರು ಗಂಟೆಗಳ ಕಾಲ ಹಿಡಿಯುತ್ತಿದ್ದ ಪ್ರಯಾಣ, ಈಗ ಉತ್ತಮ ರಸ್ತೆಯಿಂದಾಗಿ ಕೇವಲ ಎರಡು-ಮೂರು ಗಂಟೆಗಳಿಗೆ ಇಳಿಕೆಯಾಗಿದ್ದು, ಆರ್ಥಿಕತೆಗೂ ಭಾರಿ ಬೂಸ್ಟ್ ಸಿಗಲಿದೆ.
ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಭಾರಿ ಅನುಕೂಲ:
ಮಂಗಳೂರು ಬಂದರಿನಿಂದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ವಾಣಿಜ್ಯ ಸರಕುಗಳ ಸಾಗಣೆಗೆ ಶಿರಾಡಿ ಘಾಟ್ ಪ್ರಮುಖ ಮಾರ್ಗವಾಗಿದೆ. ಈ ಕಾಮಗಾರಿ ಪೂರ್ಣಗೊಂಡಿರುವುದು ಕೇವಲ ಸರಕು ಸಾಗಣೆಗೆ ಮಾತ್ರವಲ್ಲದೆ, ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಲಕ್ಷಾಂತರ ಜನರು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡಲಿದೆ. ಹಾಸನ ಮತ್ತು ಸಕಲೇಶಪುರ ಭಾಗದ ಪ್ರವಾಸೋದ್ಯಮಕ್ಕೂ ಇದು ದೊಡ್ಡ ಕೊಡುಗೆ ನೀಡಲಿದೆ.
ನಿರಂತರ ಭೂಕುಸಿತದ ಭೀತಿಯಿಂದಾಗಿ ರಾತ್ರಿಯಿಡೀ ನರಳಬೇಕಾದ ಅನಿವಾರ್ಯತೆ ಇನ್ನು ತಪ್ಪಲಿದೆ ಎಂದು ವಾಹನ ಚಾಲಕರು ನೆಮ್ಮದಿ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷಗಳಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸ್ಥಳಗಳಲ್ಲಿ, ವಿಶೇಷವಾಗಿ ದೋಣಿಗಲ್ ಮತ್ತು ದೊಡ್ಡತಪ್ಲು ಬಳಿ, ಈಗ ಚತುಷ್ಪತ ರಸ್ತೆ ನಿರ್ಮಿಸಲಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ಒಂದು ಮಾರ್ಗದಲ್ಲಾದರೂ ಸಂಚಾರಕ್ಕೆ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗಿದೆ.
ವೈದ್ಯಕೀಯ ತುರ್ತು ಸಂದರ್ಭಗಳಿಗೂ ಇದು ದೊಡ್ಡ ಅನುಕೂಲವಾಗಿದೆ. ದಶಕಗಳ ಕನಸು ನನಸಾಗುತ್ತಿರುವ ಖುಷಿ ಒಂದೆಡೆಯಾದರೆ, ಮುಂಬರುವ ಭೀಕರ ಮಳೆಗಾಲದ ಪರೀಕ್ಷೆಯಲ್ಲಿ ಈ ಕಾಮಗಾರಿಯ ಗುಣಮಟ್ಟ ಮತ್ತು ಸುಸ್ಥಿರತೆ ಸಾಬೀತಾಗಬೇಕಿದೆ.







