ಬಂಟ್ವಾಳ: ತಾಲೂಕಿನ ಮೆಲ್ಕಾರ್ನಲ್ಲಿ ಚಲಿಸುತ್ತಿದ್ದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಲಾರಿಯಲ್ಲಿದ್ದ ಗುಜುರಿ ಸಾಮಗ್ರಿಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ಈ ಲಾರಿಯು ಬೆಂಗಳೂರು ಮೂಲದ್ದಾಗಿದ್ದು, ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಗುಜುರಿ ಸಾಮಗ್ರಿಗಳನ್ನು ಲೋಡ್ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿತ್ತು. ಮೆಲ್ಕಾರ್ ಪ್ರದೇಶದ ಸಮೀಪ ತಲುಪುತ್ತಿದ್ದಂತೆ ಲಾರಿಯ ಹಿಂಭಾಗದಲ್ಲಿ ಏಕಾಏಕಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಚಾಲಕ ಲಾರಿಯನ್ನು ನಿಲ್ಲಿಸುವಷ್ಟರಲ್ಲೇ ಬೆಂಕಿ ಇಡೀ ಲಾರಿಗೆ ವ್ಯಾಪಿಸಿದೆ. ಲಾರಿಯಲ್ಲಿದ್ದ ಗುಜುರಿ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯರು ಕೂಡ ಅಗ್ನಿಶಾಮಕ ಸಿಬ್ಬಂದಿಗೆ ಸಹಕಾರ ನೀಡಿದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಗುಜುರಿ ಸಾಮಗ್ರಿಗಳ ನಡುವೆ ಇದ್ದ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವ ಸಾಧ್ಯತೆಯಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.







