ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರೀಶ್ ಶೆಟ್ಟಿ ಇತ್ತೀಚೆಗೆ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಕಾಂಪ್ಟಿಯ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಪ್ರತಿಷ್ಠಿತ ಪ್ರೀ-ಕಮಿಷನ್ ಕೋರ್ಸ್ (PRCN) ಯಶಸ್ವಿಯಾಗಿ ಪೂರ್ಣಗೊಳಿಸಿ ರಾಷ್ಟ್ರೀಯ ಕೆಡೆಟ್ ಕೋರ್ (NCC) ನೌಕ ವಿಭಾಗದಲ್ಲಿ ಸಬ್ ಲೆಫ್ಟಿನೆಂಟ್ ರ್ಯಾಂಕ್ ಪಡೆಯುದರ ಮೂಲಕ ಎನ್.ಸಿ.ಸಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಇವರು ಜನವರಿ 5 ರಿಂದ ಏಪ್ರಿಲ್ 4ರ ವರೆಗೆ ನಡೆದ ತರಬೇತಿಯಲ್ಲಿ, ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾದ ನಾಯಕತ್ವ, ಶಿಸ್ತು, ಸಂಘಟನಾ ಚಾತುರ್ಯ ಮತ್ತು ಡ್ರಿಲ್ ಮುಂತಾದ ವಿಷಯಗಳ ಕುರಿತು ತರಬೇತಿ ಪಡೆದುಕೊಂಡಿದ್ದಾರೆ. ಇವರಿಗೆ ಎನ್.ಸಿ.ಸಿ.ಯ ಮಹಾನಿರ್ದೇಶಕರು (DGNCC) ಸಬ್ ಲೆಫ್ಟಿನೆಂಟ್ ಪದವಿಯನ್ನು ನೀಡಿ ಗೌರವಿಸಿದ್ದಾರೆ.

ಮೂಲತಃ ಉಡುಪಿಯ ಕುಂದಾಪುರ ತಾಲೂಕಿನ ಮುದೂರಿನವರಾಗಿದ್ದು, ಧಾರವಾಡದ ಡಾ. ಡಿ ಜಿ ಶೆಟ್ಟಿ ವಿದ್ಯಾ ಸಂಸ್ಥೆಯಲ್ಲಿ ಪದವಿಯನ್ನು ಮುಗಿಸಿ, ಸ್ನಾತಕೋತ್ತರ ಪದವಿಯನ್ನು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪೂರೈಸಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಸಾಧನೆಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ , ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.







