ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಸಿಕ್ಕಿಬಿದ್ದ ಐದೂವರೆ ಕೋಟಿ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮಂಗಳೂರು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂತು ಬೆಳ್ತಂಗಡಿಯ ಅಂಬುಲೆನ್ಸ್ ಚಾಲಕನ ಹೆಸರು.

ಬೆಳ್ತಂಗಡಿಯ ಅಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಪ್ರಕರಣದ ಪ್ರಮುಖ ಕೊಂಡಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಂಗಳೂರು ನಗರ ಅಪರಾಧ ವಿಭಾಗ (CCB) ಪೊಲೀಸರು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಹೆಚ್ಚುವರಿ ವರದಿಯಲ್ಲಿ ಜಲೀಲ್ ಬಾಬಾನ ಹೆಸರನ್ನು ಸೇರಿಸಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್, ಉಜಿರೆಯ ಮೊಹಮ್ಮದ್ ಮುಸ್ತಫಾ, ಅಲ್ಪಾಜ್ ಮತ್ತು ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ವಿರುದ್ಧ ಪ್ರಕರಣ ದಾಖಲಾಗಿತ್ತು.

ಆರಂಭದಲ್ಲಿ ಕುಳಾಯಿಗುಡ್ಡೆ ಬಳಿ ಅಣ್ಣಪ್ಪ ಸ್ವಾಮಿಯಿಂದ 15.17 ಗ್ರಾಂ MDMA ಜಪ್ತಿ ಮಾಡಿದ್ದ ಸಿಸಿಬಿ ಪೊಲೀಸರು, ತನಿಖೆ ತೀವ್ರಗೊಳಿಸಿದಾಗ ದೆಹಲಿಯಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ಬೃಹತ್ ಜಾಲದ ಗುಟ್ಟು ರಟ್ಟಾಯಿತು. ಜುಲೈ 15 ರಂದು ಬಾಗಲಕೋಟೆ ಹುನಗುಂದ ಬಳಿಯ ಲಾಡ್ಜ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ₹5.5 ಕೋಟಿ ಮೌಲ್ಯದ 5.196 ಕೆಜಿ ಎಂಡಿಎಂಎ ಹಾಗೂ ಕಾರನ್ನು ವಶಕ್ಕೆ ಪಡೆದಿದ್ದರು.

ಬಂಧಿತ ಆರೋಪಿಗಳ ವಿಚಾರಣೆ ವೇಳೆ ಅಂಬುಲೆನ್ಸ್ ಚಾಲಕ ಜಲೀಲ್ ಬಾಬಾನ ನೇರ ಸಂಪರ್ಕವಿರುವುದು ಖಚಿತವಾಗಿದೆ. ಮಂಗಳೂರು ಸಿಸಿಬಿ ಪೊಲೀಸರ ತನಿಖೆಯಲ್ಲಿ ನಾಲ್ಕನೇ ಆರೋಪಿಯಾಗಿ ಅಂಬುಲೆನ್ಸ್ ಮೂಲಕ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಬೆಳ್ತಂಗಡಿಯ ಜಲೀಲ್ @ ಬಾಬಾ (42ವ) ಇದೀಗ ಬಂಧನದ ಭೀತಿಯಿಂದ ವಿದೇಶಕ್ಕೆ ಪರಾರಿಯಾಗಿ ಅಡಗಿಕುಳಿತಿದ್ದಾನೆ ಎನ್ನಲಾಗಿದೆ.

ಕಳೆದ 8 ದಿನಗಳಿಂದ ಮಂಗಳೂರು ಸಿಸಿಬಿ ಪೊಲೀಸರ ಬಂಧನದ ಭೀತಿಯಿಂದ ಎರಡು ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿರುವ ಜಲೀಲ್ ಬಾಬಾ ತನ್ನ ಗೆಳೆಯರ ಸಹಾಯದಿಂದ ಜು.25 ರಂದು ಶನಿವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಿಂದ ದುಬೈ ದೇಶಕ್ಕೆ ಪರಾರಿಯಾಗಿದ್ದಾನೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸರಯ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.






