ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಕೌಟುಂಬಿಕ ಕಿರುಕುಳದಿಂದಾಗಿ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ!

ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಜುಬೈದ್ ಅವರ ಪುತ್ರಿ ಫಾತಿಮತ್ ನಿಶಾನ ಅವರಿಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು.
ಜುಲೈ 18ರ ರಾತ್ರಿ ಫಾತಿಮತ್ ತಮ್ಮ ತಾಯಿಗೆ ಕರೆ ಮಾಡಿ, ‘ಮಾವ, ಅತ್ತೆ ಹಾಗೂ ನಾದಿನಿಯಿಂದ ಮಾನಸಿಕ ಮತ್ತು ದೈಹಿಕ ಕಿರುಕುಳವಾಗುತ್ತಿದೆ’ ಎಂದು ಅಳಲು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಅವರ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದಾರೆ.


ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಸುಳ್ಯ ಠಾಣೆ ಪೊಲೀಸರು ಜುಲೈ 22ರಂದು ಕಾರ್ಯಾಚರಣೆ ನಡೆಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS)-2023ರ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು, ಮೃತಳ ಮಾವ ಸಿ.ಪಿ. ಅಳವಿ, ಅತ್ತೆ ಅಯಿಷಾ ಮತ್ತು ನಾದಿನಿ ಫಸಿಲಾ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿಗಳನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







