ಪುತ್ತೂರು: ಸಂಪಾಜೆ ತಾಲೂಕಿನ ಕಡೆಪಾಲದಲ್ಲಿ ನಡೆದ 22 ವರ್ಷದ ಯುವತಿಯ ಅನುಮಾನಾಸ್ಪದ ಸಾವು ಇದೀಗ ಭಾರಿ ಕುತೂಹಲ ಹಾಗೂ ಅನುಮಾನಗಳಿಗೆ ಕಾರಣವಾಗಿದೆ.

‘ನನಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ’ ಎಂದು ತಾಯಿಗೆ ಕರೆ ಮಾಡಿ ಅತ್ತಿದ್ದ ಯುವತಿ, ಕೆಲವೇ ಗಂಟೆಗಳಲ್ಲಿ ಹೆಣವಾಗಿ ಬಿದ್ದಿದ್ದಾಳೆ! ಇದು ಆತ್ಮಹತ್ಯೆಯೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬ ಪ್ರಶ್ನೆ ಹುಟ್ಟುಹಾಕಿದ್ದು, ಮೃತರ ಕುಟುಂಬಸ್ಥರು ಪೊಲೀಸ್ ದೂರು ನೀಡಿದ್ದಾರೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಜುಲೈ 18ರ ರಾತ್ರಿ ಸಂಪಾಜೆ ಕಡೆಪಾಲದ ಅಲಿಗುಡ್ಡೆ ನಿವಾಸಿ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ (22) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು ತಾಲೂಕಿನ ಸಾರೆಪುಣಿ ನಿವಾಸಿ ಜುಬೈದಾ ಎಂಬವರ ಪುತ್ರಿಯಾಗಿದ್ದ ನಿಶಾನ ಅವರಿಗೆ ನಾಲ್ಕು ವರ್ಷಗಳ ಹಿಂದೆ ಅನ್ಸಾರ್ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ಎರಡೂವರೆ ವರ್ಷದ ಪುತ್ರನಿದ್ದಾನೆ.

ಘಟನೆಯ ದಿನ ರಾತ್ರಿ ಫಾತಿಮತ್ ನಿಶಾನ ತಮ್ಮ ತಾಯಿಗೆ ಕರೆ ಮಾಡಿ, ‘ಗಂಡನ ಮನೆಯಲ್ಲಿ ನನಗೆ ತೀವ್ರ ಕಿರುಕುಳ ನೀಡುತ್ತಿದ್ದಾರೆ’ ಎಂದು ತಿಳಿಸಿದ್ದರು. ಮಗಳ ಕರೆ ಬಂದ ತಕ್ಷಣ ತಾಯಿ ಜುಬೈದಾ ಕುಂಬ್ರದಿಂದ ಆಟೋದಲ್ಲಿ ಮಗಳ ಮನೆಗೆ ಧಾವಿಸಿದ್ದಾರೆ. ಆದರೆ, ತಾಯಿ ಮನೆ ತಲುಪುವಷ್ಟರಲ್ಲಿ ನಿಶಾನ ಮೃತಪಟ್ಟ ಸ್ಥಿತಿಯಲ್ಲಿದ್ದರು. ಸ್ನಾನಗೃಹದ ಶವರ್ಗೆ ನೇಣು ಬಿಗಿದುಕೊಂಡು ನಿಶಾನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳುತ್ತಿದ್ದಾರೆ. ಆದರೆ ಈ ವಾದವನ್ನು ನಿಶಾನ ಕುಟುಂಬಸ್ಥರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

‘ಇದು ಆತ್ಮಹತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊಲೆ’ ಎಂದು ಆರೋಪಿಸಿರುವ ಮೃತರ ತಾಯಿ ಹಾಗೂ ಸಹೋದರರು ಪೊಲೀಸ್ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಈ ಸಾವಿನ ನಿಜವಾದ ಕಾರಣ ಏನೆಂಬುದು ಹೊರಬರಬೇಕಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.






