ಉಜಿರೆ,ದಿ.ಜು. 22 : ಸ್ಪರ್ಧಾತ್ಮಕ ಯುಗದಲ್ಲಿ ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ಕಲೆಯನ್ನು ಕರಗತ ಮಾಡಿಕೊಂಡು ವೃತ್ತಿಪರತೆಯನ್ನು ಬೆಳೆಸಿಕೊಳ್ಳಬೇಕು. ನಿರಂತರವಾದ ಸಾಮಾಜಿಕ ಜಾಲತಾಣಗಳ ಮೇಲಿನ ಅವಲಂಬನೆ ನಮ್ಮೊಳಗಿನ ಕ್ರಿಯಾಶೀಲತೆಯನ್ನು ಕುಂಠಿತಗೊಳಿಸುತ್ತದೆ.


ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಕೆಯಾಗಲಿ. ಪ್ರತಿಯೊಂದು ಕ್ಷೇತ್ರವೂ ನಮ್ಮೊಳಗಿನ ಕೌಶಲ್ಯ ಮತ್ತು ಪ್ರತಿಭೆಯನ್ನು ನಿರೀಕ್ಷಿಸುತ್ತದೆ. ಆ ಹಾದಿಯಲ್ಲಿ ನಡೆದಾಗ ಅವಕಾಶಗಳು ತೆರೆದುಕೊಳ್ಳುತ್ತದೆ. ಆ ಅವಕಾಶಗಳು ಉತ್ತಮ ಉದ್ಯೋಗವನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹಿರಿಯ ವಿದ್ಯಾರ್ಥಿ ಹಾಗು ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ವಿಶಾಲ್ ಪಿಂಟೋ ಅಭಿಪ್ರಾಯ ಪಟ್ಟರು.
ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಕಾಮರ್ಸ್ ವಿಭಾಗ ಮತ್ತು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಬಹುಮುಖ್ಯ. ಭವಿಷ್ಯವನ್ನು ಶಸಕ್ತಗೊಳಿಸಲು ವಿದ್ಯಾರ್ಥಿಗಳು ಜ್ಞಾನದ ಮೈಲಿಗಲ್ಲನ್ನು ಸ್ಥಾಪಿಸುವ ಜೊತೆಗೆ ಕೌಶಲ್ಯ ಭರಿತರಾಗಿ ರೂಪುಗೊಳ್ಳಬೇಕು. ಸವಾಲುಗಳನ್ನು ನಿವಾರಿಸುವ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಉನ್ನತ ಮಟ್ಟದ ವ್ಯಕ್ತಿತ್ವವನ್ನು ನಮ್ಮದಾಗಿಸಿಕೊಳ್ಳಬೇಕು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ನಾನ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ಇದನ್ನು ಸಕ್ರೀಯವಾಗಿ ಬಳಸಿಕೊಂಡು ಭವಿಷ್ಯವನ್ನು ಕಂಡುಕೊಳ್ಳಬೇಕು. ನಕರಾತ್ಮಕ ಚಿಂತನೆಗಳಿಂದ ದೂರವಿದ್ದು, ವಿದ್ಯಾರ್ಥಿ ಸಮೂಹ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬೇಕು. ಮೌಲ್ಯಯುತ ಜೀವನ ನಮ್ಮದಾಗಿಸಿಕೊಳ್ಳಬೇಕು. ನಮ್ಮೊಳಗಿನ ಸಣ್ಣ ಪ್ರತಿಭೆಯೂ ಮುಂದೊಂದು ದಿನ ಹೆಮ್ಮರವಾಗಬವುದು. ವಿದ್ಯಾರ್ಥಿ ಜೀವನ ಇಲ್ಲಿನ ಪಠ್ಯೇತರ ಚಟುವಟಿಕೆಗಳು ಪ್ರತಿಭಾ ಅನಾವರಣಕ್ಕಿರುವ ವೇದಿಕೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಕುಲಸಚಿವರಾದ ಪ್ರೋ. ಶ್ರೀಧರ ಎನ್ ಭಟ್ಟ ಮಾತನಾಡಿ, ನಿರಂತರ ಪರಿಶ್ರಮ, ಅಭ್ಯಾಸ, ಶಿಸ್ತು ಮತ್ತು ಏಕತೆಯ ಮನೋಭಾವ ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತವೆ. ಸಮಾಜವು ವಿದ್ಯಾವಂತರಿಂದ ಕೇವಲ ಪದವಿ ಅಲ್ಲ, ಉತ್ತಮ ಮೌಲ್ಯಗಳು, ಸೇವಾ ಮನೋಭಾವ ಮತ್ತು ಸಕಾರಾತ್ಮಕ ಬದಲಾವಣೆಯನ್ನು ನಿರೀಕ್ಷಿಸುತ್ತದೆ. ಪ್ರತಿಯೊಂದು ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸಿ, ತಂಡದೊಂದಿಗೆ ಕೆಲಸ ಮಾಡುವ ಗುಣವನ್ನು ಬೆಳೆಸಿಕೊಳ್ಳಿ. ಇಂತಹ ಅನುಭವಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಅಡಿಪಾಯವನ್ನು ರೂಪಿಸುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಅತಿಥಿಗಳಾದ ಡಾ. ವಿಶಾಲ್ ಪಿಂಟೋ ನೂತನವಾಗಿ ಸಂಘದ ಜವಾಬ್ದಾರಿಯನ್ನು ಸ್ವೀಕರಿಸಿದ
ವಿದ್ಯಾರ್ಥಿ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿದ್ಯಾರ್ಥಿ ರಚನೆಯ ‘ ವನಿಕ – 2026’ ಭಿತ್ತಿ ಪತ್ರಿಕೆಮನ್ನು ಅನಾವರಣ ಗೊಳಿಸಿದರು. ವಿದ್ಯಾರ್ಥಿನಿ ಮಾನ್ಯ ಈ ಹಿಂದಿನ ಶೈಕ್ಷಣಿಕ ವರ್ಷದ ‘ಕಾಮರ್ಸ್ ಕ್ಯಾಂಪಸ್’ ಅಸೋಸಿಯೇಷನ್ ಕಾರ್ಯ ಚಟುವಟಿಕೆ ಮತ್ತು ಸಾಧನೆಯ ವರದಿಯನ್ನು ವಾಚಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಮರ್ಸ್ ವಿಭಾಗದ ಡೀನ್ ಶಕುಂತಲಾ, ವಿಭಾಗದ ಮುಖ್ಯಸ್ಥೆ ಡಾ. ರತ್ನಾವತಿ ಕೆ, ಅಸೋಸಿಯೇಷನ್ ಸಂಯೋಜಕರಾದ ಉಪನ್ಯಾಸಕಿ ಫಾತಿಮಾ ಸಫಿರಾ, ಶರಚ್ಚಂದ್ರ ಕೆ ಎಸ್ ಸೇರಿದಂತೆ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಮರ್ಸ್ ಹಾಗು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಕಾಮರ್ಸ್ ವಿಭಾಗದ ಡೀನ್ ಶಕುಂತಲಾ ಸ್ವಾಗತಿಸಿದರು.
ವಿದ್ಯಾರ್ಥಿನಿ ಅದಿತಿ ಚಿಪ್ಲಂಕರ್ ನಿರೂಪಿಸಿ, ಮುಖ್ಯಸ್ಥೆ ಡಾ. ರತ್ನಾವತಿ ಕೆ ವಂದಿಸಿದರು.






