ಕಾಶಿಪಟ್ಣ: ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ಯಾಪ್ಸಿ ಫ್ರೆಂಡ್ಸ್ ತಂಡದ ಸರ್ವ ಸದಸ್ಯರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಪ್ರಕೃತಿಯ ಮಡಿಲಲ್ಲಿರುವ ಮೊರಂತ ಕಾಡು ಸೇತುವೆಯ ಸುತ್ತಮುತ್ತ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸುವ ಮೂಲಕ ಮಾದರಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಕಾಡಿನ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದ ಹಾಗೂ ಪ್ರವಾಸಿಗರು ಬಿಸಾಡಿದ್ದ ಪ್ಲಾಸ್ಟಿಕ್ ಸೀಸೆಗಳು, ಕವರ್ಗಳು ಮತ್ತು ಇತರ ಅನಗತ್ಯ ತ್ಯಾಜ್ಯವನ್ನು ತಂಡದ ಸದಸ್ಯರು ಸ್ವತಃ ಶ್ರಮದಾನದ ಮೂಲಕ ಸಂಗ್ರಹಿಸಿದರು. ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವುದು ಮತ್ತು ಪ್ರಕೃತಿ ಧಾಮಗಳನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂಬುದನ್ನು ಈ ಅಭಿಯಾನದ ಮೂಲಕ ಸಾರಲಾಯಿತು.



ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಪ್ಸಿ ಫ್ರೆಂಡ್ಸ್ ತಂಡದ ಪ್ರಮುಖರು, “ಸುಂದರವಾದ ಪ್ರಕೃತಿಯನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ. ಕಾಡು ಹಾಗೂ ಸೇತುವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರು ತ್ಯಾಜ್ಯ ಎಸೆಯದೆ ನೈರ್ಮಲ್ಯ ಕಾಪಾಡಬೇಕು” ಎಂದು ವಿನಂತಿಸಿಕೊಂಡರು.

ತಂಡದ ಈ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳಿಂದ ವ್ಯಾಪಕ ಮೆಚ್ಚುಗೆ ಮತ್ತು ಅಭಿನಂದನೆಗಳು ವ್ಯಕ್ತವಾಗಿವೆ.

ಸ್ವಚ್ಛತಾ ಕಾರ್ಯದಲ್ಲಿ ಕ್ಯಾಪ್ಸಿ ತಂಡದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.






