ಉಜಿರೆ: ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ ಆಯೋಜಿಸಿದ ಎರಡು ದಿನಗಳ ಝೇಂಕಾರ – 2026 ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವದ ಸಮಗ್ರ ಚಾಂಪಿಯನ್ಶಿಪ್ ಮನ್ನಣೆಯನ್ನು ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಕಮ್ಯುನಿಕೇಷನ್ ಕಾಲೇಜಿನ ತಂಡ ತನ್ನದಾಗಿಸಿಕೊಂಡಿದೆ. ಮಂಗಳೂರಿನ ಯೆನಪೋಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ತಂಡದ ವಿದ್ಯಾರ್ಥಿಗಳು ರನ್ನರ್ಸ್ ಆಗಿ ದ್ವಿತೀಯ ಪ್ರಾಶಸ್ತ್ಯ ಪಡೆದಿದ್ದಾರೆ.


ಸಮಾರೋಪ ಸಮಾರಂಭದಲ್ಲಿ ಎಸ್.ಡಿ.ಎಂ. ಸ್ನಾತಕೋತ್ತರ ವಿಭಾಗದ ಡೀನ್ ಸೌಮ್ಯಾ ಬಿ. ಪಿ., ಉಜಿರೆಯ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ, ಎಸ್. ಡಿ. ಎಂ. ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ಝೇಂಕಾರ ಉತ್ಸವದ ಸಂಯೋಜಕರಾದ ಡಾ ರವಿಶಂಕರ, ಡಾ. ಪ್ರಿಯಾಕುಮಾರಿ, ಪ್ರವೀಣ ಮತ್ತು ಪ್ರದೀಪ ಅವರು ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಿದರು.

ಪ್ರೊ. ವಿಶ್ವನಾಥ್ ಪಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಪ್ರತಿಭೆಯನ್ನು ಪ್ರದರ್ಶಿಸಲು
ದೊರೆಯುವ ವೇದಿಕೆ ಎಂದು ಹೇಳಿದರು. ಯಶಸ್ಸು ಕೇವಲ ಅಂಕಗಳು ಮತ್ತು ಪದವಿಗಳಿಂದ ಮಾತ್ರ ನಿರ್ಧರಿಸಲ್ಪಡುವುದಿಲ್ಲ, ಜನರೊಂದಿಗೆ ಕೆಲಸ ಮಾಡುವ ಸಾಮರ್ಥ್ಯ, ನಂಬಿಕೆಯಿಂದ ನಿರ್ಧರಿಸಲ್ಪಡುತ್ತದೆ ಎಂದು ಉಜಿರೆಯ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ಧನ ಹೇಳಿದರು.









