ಕಡಬ: ಸಣ್ಣ ಗಲಾಟೆ, ಸಣ್ಣ ಕೋಪ… ಆದರೆ ಅದರ ಪರಿಣಾಮ ಮಾತ್ರ ದೊಡ್ಡ ಕಿರಿಕಿರಿಯನ್ನೇ ತಂದಿಟ್ಟಿದೆ!

ಪ್ರೇಮಿಗಳೋ ಅಥವಾ ಸ್ನೇಹಿತರೋ ಗೊತ್ತಿಲ್ಲ, ಒಟ್ಟಿನಲ್ಲಿ ಅವರಿಬ್ಬರ ನಡುವೆ ನಡೆದ ಸಣ್ಣ ವಾಗ್ವಾದ ಕಾರಿನ ಕೀಯನ್ನು ಚರಂಡಿ ಸೇರುವಂತೆ ಮಾಡಿದೆ. ಅರೆ, ಇದೇನಪ್ಪಾ ಅಂತೀರಾ? ಹಾಗಿದ್ರೆ ಕಡಬದ ಸಂತೆಕಟ್ಟೆಯಲ್ಲಿ ನಡೆದ ಈ ಸ್ವಾರಸ್ಯಕರ ಘಟನೆಯ ವರದಿ ನೋಡಿ..
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸಂತೆಕಟ್ಟೆ ಬಳಿ ಈ ಘಟನೆ ನಡೆದಿದೆ. ಇಲ್ಲಿದ್ದ ಯುವಕ ಮತ್ತು ಯುವತಿಯ ನಡುವೆ ಹಠಾತ್ತಾಗಿ ಸಣ್ಣ ಜಗಳ ಪ್ರಾರಂಭವಾಗಿದೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಮಾತಿಗೆ ಮಾತು ಬೆಳೆದಿದೆ.

ಕೋಪದ ಕೈಗೆ ಬುದ್ಧಿ ಕೊಟ್ಟ ಯುವತಿ, ತಕ್ಷಣವೇ ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದುಕೊಂಡು ಪಕ್ಕದಲ್ಲೇ ಇದ್ದ ಚರಂಡಿಗೆ ತೂರಿದ್ದಾಳೆ! ಕೀ ಚರಂಡಿ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದವರು ಕ್ಷಣಕಾಲ ಶಾಕ್ ಆಗಿದ್ದಾರೆ. ಇತ್ತ ಕೀ ಕಳೆದುಕೊಂಡ ಯುವಕ, ಕಾರು ಚಲಾಯಿಸಲು ಸಾಧ್ಯವಾಗದೆ ಪರದಾಡುವಂತಾಯಿತು.


ಅಂತಿಮವಾಗಿ ಸ್ಥಳೀಯರ ನೆರವು ಪಡೆದ ಯುವಕ, ಚರಂಡಿಯಲ್ಲಿದ್ದ ಕೀಗಾಗಿ ಹುಡುಕಾಟ ನಡೆಸಿದ್ದಾನೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಚರಂಡಿ ಜಾಲಾಡಿದರೂ ಕೀ ಮಾತ್ರ ಪತ್ತೆಯಾಗಲಿಲ್ಲ.
ಈ ಹುಡುಕಾಟವನ್ನು ನೋಡಲು ಸಂತೆಕಟ್ಟೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಯಾರೋ ಒಬ್ಬರು ಈ ಇಡೀ ಪ್ರಹಸನವನ್ನು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, “ಕೋಪದಲ್ಲಿ ನಿರ್ಧಾರ ತಗೋಬಾರದು ಅನ್ನೋದಕ್ಕೆ ಇದೇ ಸಾಕ್ಷಿ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.





