ಉಜಿರೆ: ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ ಉಜಿರೆಯ ಸಮಾಜಮುಖಿ ವ್ಯಕ್ತಿತ್ವದ ಶ್ರೀಧರ್ ಗೌಡ ಮರಕ್ಕಡರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾನುವಾರ “ನುಡಿನಮನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಕ್ಷೇತ್ರಗಳ ಗಣ್ಯರು ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳುತ್ತಾ, ಶ್ರೀಧರ್ ಗೌಡರ ಸಾಮಾಜಿಕ ಬದ್ಧತೆಯನ್ನು ಸ್ಮರಿಸಿದರು.

ವಿಧಾನಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಧರ್ ಗೌಡರ ಅಕಾಲಿಕ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.

ಪ್ರಮುಖರಾದ ಜಯಂತ್ ಟಿ. ಹಾಗೂ ವಿನುತ ರಜತ್ ಅವರು ಕೂಡಾ ಮೃತರ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡು, ಅವರ ಸ್ನೇಹಜೀವಿ ಸ್ವಭಾವವನ್ನು ನೆನಪಿಸಿಕೊಂಡರು.
ನುಡಿನಮನ ಕಾರ್ಯಕ್ರಮದಲ್ಲಿ ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಿದರು.






