ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದ ಅಂತ್ರಾಯ ಪಲ್ಕೆ ಎಂಬಲ್ಲಿರುವ ‘ಅಂತ್ರಾಯ ಗುಂಡಿ’ಯಲ್ಲಿ ಸ್ನಾನಕ್ಕೆಂದು ತೆರಳಿದ್ದ ನಾಲ್ವರು ಬಾಲಕರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ.

ಉಜಿರೆಯ ಕುಂಟಿನಿ ಪರಿಸರದ ನಾಲ್ವರು ಬಾಲಕರು ಇಂದು ಅಂತ್ರಾಯ ಗುಂಡಿಗೆ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಹಫೀಝ್ ಎಂಬಾತ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದನು.ಯುವಕ ಮುಳುಗುತ್ತಿದ್ದಂತೆ ಜೊತೆಯಲ್ಲಿದ್ದವರು ಹಾಗೂ ಸ್ಥಳೀಯರು ತಕ್ಷಣ ಹುಡುಕಾಟ ನಡೆಸಿದ್ದಾರೆ.ದುರದೃಷ್ಟವಶಾತ್ ಹಫೀಝ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಕೆಲ ಸಮಯದ ಹುಡುಕಾಟದ ನಂತರ ಆತನ ಶವ ಪತ್ತೆಯಾಗಿದೆ.ಸ್ಥಳೀಯರು ಶವವನ್ನು ಮೇಲಕ್ಕೆತ್ತಿ, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.









