ಉಡುಪಿ: ಉಡುಪಿಯ ಮಣಿಪಾಲದಲ್ಲಿ ಪಾಗಲ್ ಪ್ರೇಮಿಯೊಬ್ಬನ ಅಟ್ಟಹಾಸ ಮೆರೆದಿದ್ದಾನೆ. ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ಯುವತಿಯ ಮೇಲೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೆ ಯತ್ನಿಸಿರುವ ಆತಂಕಕಾರಿ ಘಟನೆ ಮಣಿಪಾಲದ ಶಾಂತಿನಗರದಲ್ಲಿ ನಡೆದಿದೆ.
ಗಾಯಗೊಂಡ ಯುವತಿಯನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ 23 ವರ್ಷದ ಯೋಗೀತಾ ಎಂದು ಗುರುತಿಸಲಾಗಿದೆ. ಯೋಗೀತಾ ಅವರು ಮಣಿಪಾಲದ ಶಾಂತಿನಗರದಲ್ಲಿರುವ ಐಡಿಯಲ್ ಬಿಲ್ಡಿಂಗ್ನ ಮಹಿಳಾ ಪಿಜಿಯಲ್ಲಿ ವಾಸವಾಗಿದ್ದರು. ಮಂಗಳವಾರ ರಾತ್ರಿ ಯೋಗೀತಾ ಅವರು ಪಿಜಿ ಬಳಿ ಇದ್ದಾಗ, ಅಲ್ಲಿಗೆ ಬಂದ ಆರೋಪಿ ಏಕಾಏಕಿ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.




