ನವದೆಹಲಿ: ನೀಟ್ ಅಭ್ಯರ್ಥಿಗಳಿಗೆ ಇಂದು ಒಂದು ಪ್ರಮುಖ ಅಪ್ಡೇಟ್ ಇದೆ. ಕಳೆದ ಮೇ 3 ರಂದು ನಡೆದಿದ್ದ ನೀಟ್ ಯುಜಿ 2026ರ ಪರೀಕ್ಷೆ ರದ್ದಾದ ಬೆನ್ನಲ್ಲೇ, ಈಗ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮರುಪರೀಕ್ಷೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಆತಂಕಕ್ಕೆ ಈಗ ತೆರೆ ಬಿದ್ದಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ(ಮೇ 15) ಈ ಬಗ್ಗೆ ಮಹತ್ವದ ಆದೇಶ ಹೊರಡಿಸಿದ್ದು, ಜೂನ್ 21 ರಂದು ದೇಶಾದ್ಯಂತ ಮರುಪರೀಕ್ಷೆ ನಡೆಸುವುದಾಗಿ ತಿಳಿಸಿದೆ.
ಈ ಮೊದಲು ನಡೆದಿದ್ದ ನೀಟ್ ಪರೀಕ್ಷೆಯು ರದ್ದಾದ ನಂತರ ವೈದ್ಯಕೀಯ ಸೀಟಿಗಾಗಿ ಹಂಬಲಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿತ್ತು. ಈ ಬಗ್ಗೆ ಸರ್ಕಾರದಿಂದ ಅನುಮೋದನೆ ಪಡೆದಿರುವ ಎನ್ಟಿಎ, ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯ ಮೂಲಕ ಜೂನ್ 21, ರವಿವಾರದಂದು ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಪರೀಕ್ಷೆಯ ಕುರಿತು ಎದ್ದಿದ್ದ ಅನಿಶ್ಚಿತತೆಗೆ ತೆರೆ ಬಿದ್ದಂತಾಗಿದೆ.
ಪರೀಕ್ಷೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಬಹುದಾದ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಎನ್ಟಿಎ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕಿವಿಮಾತು ಹೇಳಿದೆ. ಪರೀಕ್ಷಾ ಅಪ್ಡೇಟ್ಗಳಿಗಾಗಿ ಕೇವಲ ಎನ್ಟಿಎ ಅಧಿಕೃತ ವೆಬ್ಸೈಟ್ ಮತ್ತು ಅಧಿಕೃತ ಸಂವಹನ ಮಾಧ್ಯಮಗಳನ್ನೇ ಅವಲಂಬಿಸಬೇಕು ಎಂದು ಸೂಚಿಸಿದೆ. ಸದ್ಯ ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.





